ಪುತ್ತೂರು : ಬಡಗನ್ನೂರು ಗ್ರಾಮದ ಪೆರಿಗೇರಿ ನೂಚಿಲೋಡು ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಭೂತಾರಾಧನೆ ಕುರಿತು ಬಯಲು ಸೀಮೆಯ ಜನ ಕೂಡ ತಿಳಿದುಕೊಳ್ಳುವ ಸಂಗತಿ ಕಾಂತರ ಸಿನಿಮಾದ ಮೂಲಕ ಆಗಿದೆ. ನಂಬಿಕೆ ಆಧಾರದಲ್ಲಿ ನಮ್ಮ ಜೀವನ ಪದ್ಧತಿ ಇದೆ ನಮ್ಮಲ್ಲಿ ಪ್ರೀತಿ ವಿಶ್ವಾಸ, ಸಹ ಬಾಳ್ವೆಯ ಜೀವನ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಿ ಬಂದಿದೆ. ದೈವಸ್ಥಾನಗಳ ಜೀರ್ಣೋದಾರದ ಮುಖಾಂತರ ಮತ್ತೊಮ್ಮೆ ನಾವು ನೆಮ್ಮದಿ ಸಮೃದ್ಧಿಯನ್ನು ಕಾಣುವಂತ ಕೆಲಸ ವಿಶೇಷವಾಗಿ ಭೂತಾರಾಧನೆಯಿಂದ ಕಾಣಬೇಕಾಗಿದೆ ಎಂದ ಅವರು, ಈ ದೇವಸ್ಥಾನ ಕೂಡಾ ಒಂದು ಶ್ರೀ ಕ್ಷೇತ್ರವಾಗಿ ಮೂಡಿ ಬರಲು ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ವೇದಮೂರ್ತಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದುಕೂಡ್ಲು ಶ್ರೀನಿವಾಸ ಭಟ್, ಸುಧಾಕರ ಶೆಟ್ಟಿ ಮಂಗಳಾದೇವಿ ಅವರನ್ನು ಸನ್ಮಾನಿಸಲಾಯಿತು. ವಿಶಾಲಾಕ್ಷಿ ಅಮ್ಮ ನುಜಿಲೋಡು ,ಮಹದೇವ್ ಭಟ್ ಕೂಲ್ಯ, ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಜ್ಯೋತಿಷಿ ನವನೀತಪ್ರಿಯ ಕೈಪಂಗಳ ಉಪಸ್ಥಿತರಿದ್ದರು.
ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, ಪೆರಿಗೇರಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ಬೆಳಿಗ್ಗೆ 10.54 ರಿಂದ 11.40 ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠೆ ಜರಗಿತು.