ಕೆ.ವಿ.ಜಿ.ಯಂತೆಯೇ ಎ.ವಿ.ಜಿ. ಬೆಳಗಲಿ | ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಈ ವರ್ಷ ಎಲ್.ಕೆ.ಜಿ.ಯಿಂದ ಪ್ರಾರಂಭಗೊಳ್ಳುತ್ತಿದೆ. ಗುಣಮಟ್ಟದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ, ಮಾದರಿ ಸಂಸ್ಥೆಯಾಗಿ ಮೂಡಿಬರಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಬನ್ನೂರಿನ ಕೃಷ್ಣನಗರದಲ್ಲಿ ಅಲುಂಬುಡದಲ್ಲಿ ಎವಿಜಿ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಪ್ರೇಮ ಇಲ್ಲದ ಶಿಕ್ಷಣ ಎಂದೂ ಯಶಸ್ವಿ ಆಗಲಾರದು. ದೇಶಪ್ರೇಮದ ಜೊತೆಗೆ ಶಿಕ್ಷಣ ಪಡೆದ ವ್ಯಕ್ತಿ ದೇಶದ ಸಂಪನ್ಮೂಲವಾಗಿ ಗುರುತಿಸಿಕೊಳ್ಳುತ್ತಾನೆ. ಇಂತಹ ದೇಶಪ್ರೇಮ, ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶವಿಟ್ಟುಕೊಂಡು ಎವಿಜಿ ಸ್ಕೂಲ್ ಪ್ರಾರಂಭವಾಗಿದೆ. ಸುಳ್ಯದಲ್ಲಿ ಕೆವಿಜಿ ಕಾಲೇಜು ವೈದ್ಯಕೀಯ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಯನ್ನು ಆರಂಭಿಸಿದಂತೆ, ಎವಿಜಿ ಸಂಸ್ಥೆಯೂ ಸಮಾಜಕ್ಕೆ ಮಾದರಿಯಾಗಿ ಬೆಳಗಲಿ ಎಂದು ಹಾರೈಸಿದರು.



































 
 

ಭಾರತೀಯತೆಗೆ ಪೂರಕವಾಗಿರಲಿ:

ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಕೆಜಿಯಿಂದ ಯುಜಿವರೆಗೆ ಶಿಕ್ಷಣವನ್ನು ಅಮೂಲಾಗ್ರವಾಗಿ ಬದಲಾಯಿಸಿ, ಭಾರತೀಯತೆಗೆ ಪೂರಕವಾಗಿ ಮಕ್ಕಳನ್ನು ಬೆಳೆಸುವ ಯೋಜನೆ ಇದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟನ್ ರಾಣಿ, ಮೆಕಾಲೆಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಳು. ಆತ ಒಂದು ವರದಿಯನ್ನು ರಾಣಿಗೆ ಸಲ್ಲಿಸುತ್ತಾನೆ. ಅದರಲ್ಲಿ ಉಲ್ಲೇಖಿಸಿದಂತೆ, ಭಾರತದ ವ್ಯವಸ್ಥೆಯನ್ನು ಬ್ರಿಟಿಷ್ ಆಡಳಿತಕ್ಕೆ ತಕ್ಕಂತೆ ಬದಲಾಯಿಸಬೇಕಾದರೆ, ಭಾರತದ ಶಿಕ್ಷಣವನ್ನು ಅಮೂಲಾಗ್ರವಾಗಿ ಬದಲಾಯಿಸಬೇಕು ಎಂದಿದ್ದ. ಅದಕ್ಕೆ ತಕ್ಕಂತೆ ಇಲ್ಲಿನ ಶಿಕ್ಷಣವನ್ನು ಬದಲಾಯಿಸಿ, ವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಂಡರು. ಇಂದು ಆ ಶಿಕ್ಷಣವನ್ನು ಬದಲಾಯಿಸಿ, ಭಾರತೀಯತೆಗೆ ಪೂರಕವಾಗಿ ದೇಶಪ್ರೇಮ ಬಿಂಬಿಸುವಂತಹ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಈ ಕೆಲಸವನ್ನು ಎವಿಜಿ ವಿದ್ಯಾಸಂಸ್ಥೆ ಮಾಡಲಿ ಎಂದು ಶಾಸಕರು ಹಾರೈಸಿದರು.

ಪುತ್ತೂರು ಎಜುಕೇಶನ್ ಹಬ್:

ಪುತ್ತೂರು ಎಜುಕೇಶನ್ ಹಬ್. ಇಲ್ಲಿ ಅನೇಕ ವಿದ್ಯಾಸಂಸ್ಥೆಗಳಿವೆ. ಇತ್ತೀಚೆಗೆ ಅಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಸ್ಟೆಲ್‍ಗಳಲ್ಲಿಯೂ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದೆ. ಇದಕ್ಕೆ ಬೇರೆಯದ್ದೇ ಕಾರಣಗಳಿವೆ. ಆದರೆ ಆಧುನಿಕ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡಿದರೆ ಮತ್ತು ವಿಭಿನ್ನವಾದ ಶಿಕ್ಷಣವನ್ನು ನೀಡಿದಾಗ ಮಕ್ಕಳ ಸಂಖ್ಯೆ ಖಂಡಿತವಾಗಿಯೂ ಹೆಚ್ಚುತ್ತದೆ. ಅಂತಹ ಶಿಕ್ಷಣವನ್ನು ಎವಿಜಿ ವಿದ್ಯಾಸಂಸ್ಥೆ ನೀಡಲಿ. ಅಂಕಗಳಿಗಷ್ಟೇ ಸೀಮಿತವಾಗದೇ, ದೇಶಪ್ರೇಮ ನೀಡುವಂತಹ ಶಿಕ್ಷಣ ನೀಡುವಂತಾಗಲಿ ಎಂದು ಸಂಜೀವ ಮಠಂದೂರು ಹೇಳಿದರು.

ಗುಣಮಟ್ಟದ ಶಿಕ್ಷಣಕ್ಕೆ ಸೋಲಿಲ್ಲ: ಭಾಸ್ಕರ ದೇವಸ್ಯ

ಕಟೀಲು ನಿಡ್ಡೋಡಿ ಜನನರತ್ನ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ್ ದೇವಸ್ಯ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಸೋಲಿಲ್ಲ ಎನ್ನುವುದಕ್ಕೆ ತಾನೇ ಒಂದು ಉದಾಹರಣೆ. ಕಳೆದ 2 ವರ್ಷಗಳಿಂದ ಯೋಜನೆಗಳನ್ನು ಹಾಕಿಕೊಂಡು, ಇಂದು ಎವಿಜಿ ವಿದ್ಯಾಸಂಸ್ಥೆ ಉದ್ಘಾಟನೆಗೊಂಡಿದೆ. ಶಿಕ್ಷಣ ಸಂಸ್ಥೆ ನಡೆಸುವುದು ಹುಲಿ ಸವಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಎ.ವಿ. ನಾರಾಯಣ್ ಮತ್ತು ಅವರ ತಂಡ ಸಮಾಜಕ್ಕೆ ಕೂಸೆಂಬ ರೀತಿಯಲ್ಲಿ ಈ ವಿದ್ಯಾಸಂಸ್ಥೆಯನ್ನು ಸಮರ್ಪಿಸುತ್ತಿದ್ದಾರೆ. ನಿಯಮಿತ ವ್ಯವಸ್ಥೆಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ, ಈ ವಿದ್ಯಾಸಂಸ್ಥೆ ಯಶಸ್ವಿಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.

ಶಾಸಕರಿಂದ ಸರ್ವತೋಮುಖ ಅಭಿವೃದ್ಧಿ: ಗೌರಿ ಬನ್ನೂರು

ನಗರಸಭೆ ಸದಸ್ಯೆ ಗೌರಿ ಬನ್ನೂರು ಮಾತನಾಡಿ, ಪುತ್ತೂರಿನಲ್ಲಿ ಪ್ರಥಮವಾಗಿ ನಮ್ಮ ಕ್ಲಿನಿಕ್ ಅನ್ನು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಿದ್ದಾರೆ. ಅಲುಂಬುಡ ಕೆರೆಯ ಅಭಿವೃದ್ಧಿಗೂ ಅನುದಾನ ನೀಡಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಇದೀಗ ನಮ್ಮ ವಾರ್ಡಿನಲ್ಲೇ ವಿದ್ಯಾಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ವಾರ್ಡಿನ ಸರ್ವತೋಮುಖ ಬೆಳವಣಿಗೆಗೆ ಶಾಸಕರು ಕಾರಣರಾಗಿದ್ದಾರೆ ಎಂದರು.

ಸಂಜೀವ ಮಠಂದೂರು ಸಚಿವರಾಗಿ ಬರಲಿ: ವೆಂಕಟ್ರಮಣ ಗೌಡ ಕಳುವಾಜೆ

ಅಧ್ಯಕ್ಷತೆ ವಹಿಸಿದ್ದ ಎವಿಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ವಿದ್ಯಾಸಂಸ್ಥೆ ಎಂದರೆ ದೇಗುಲಕ್ಕೆ ಸಮಾನ. ಇದೇ ಭಾವನೆಯನ್ನಿಟ್ಟುಕೊಂಡು, ವಿದ್ಯಾದೇಗುಲವನ್ನು ಆರಂಭಿಸುತ್ತಿದ್ದೇವೆ. ಶಾಸಕ ಸಂಜೀವ ಮಠಂದೂರು ಅವರು ಮುಂದೆ ಸಚಿವರಾಗಿ ಬಂದು, ವಿದ್ಯಾಸಂಸ್ಥೆಯ ಹೊಸ ಕಟ್ಟಡವನ್ನು ಉದ್ಘಾಟಿಸುವಂತಾಗಬೇಕು ಎಂದ ಅವರು, ವಿದ್ಯಾಸಂಸ್ಥೆಗೆ ಎಲ್ಲರ ಸಹಕಾರ ಕೋರಿದರು.

ಸಂಜೀವ ಮಠಂದೂರು ಜನಪ್ರಿಯ ಶಾಸಕರು: ಎ.ವಿ.ನಾರಾಯಣ್

ಎವಿಜಿ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟಿನ ಸಂಚಾಲಕ ಎ.ವಿ. ನಾರಾಯಣ್ ಮಾತನಾಡಿ, ಪುತ್ತೂರಿನ ಬಹುಬೇಡಿಕೆಗಳಲ್ಲಿ ರೈಲ್ವೇ ಅಂಡರ್ ಪಾಸ್ ಕೂಡ ಒಂದಾಗಿತ್ತು. ಬಹಳ ವರ್ಷದಿಂದ ಕಾರ್ಯಗತವಾಗದೇ ಇದ್ದ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಯೋಜನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಾರೆ. ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ – ಚೆನ್ನಯ ಹೆಸರನ್ನು ಇಡುವ ಮೂಲಕ ಅವಳಿ ವೀರರ ಹೆಸರನ್ನು ಚಿರಸ್ಥಾಯಿಯಾಗಿಸುತ್ತಿದ್ದಾರೆ. ಇದೀಗ ಎವಿಜಿ ವಿದ್ಯಾಸಂಸ್ಥೆಯನ್ನು ಉದ್ಘಾಟಿಸುವ ಮೂಲಕ, ವಿದ್ಯಾಸಂಸ್ಥೆಯ ಏಳಿಗೆಗೂ ಸಹಕಾರ ನೀಡಿದಂತಾಗಿದೆ. ಅವರ ಒಟ್ಟು ಕೆಲಸಗಳಿಂದ ಜನಪ್ರಿಯ ಶಾಸಕರು ಎನ್ನುವುದು ಸಾಬೀತಾಗಿದೆ ಎಂದ ಅವರು, ವಿದ್ಯಾಸಂಸ್ಥೆಗೆ ಎಲ್ಲರ ಸಹಕಾರ ಕೋರಿದರು.

ಜಿ.ಪಂ ಮಾಜಿ ಸದಸ್ಯೆ ಪುಷ್ಪಾವತಿ ಗೌಡ ಕಳುವಾಜೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ.ವಿ, ಎ.ವಿ. ನಾರಾಯಣ್ ಅವರ ಸಹೋದರ ಗಂಗಾಧರ ಗೌಡ, ಸಹೋದರಿ ವನಿತಾ, ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಮನೋಹರ್ ರೈ ಮೆಲ್ಮಜಲು, ನಿರ್ದೇಶಕ ಸೀತಾರಾಮ ಪೂಜಾರಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪ್ರತಿಭಾದೇವಿ, ಪ್ರೇರಣಾ ಸಂಸ್ಥೆಯ ಪ್ರವೀಣ್ ಕುಂಟ್ಯಾನ, ನಾಗೇಶ್ ಕೆಡೆಂಜಿ, ಅಲೆಕ್ಸ್ ಗೊನ್ಸಾಲಿಸ್, ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ನರೇಂದ್ರ ರಾವ್, ಸಂಸ್ಥೆಯ ಸಲಹಾ ಸಮಿತಿ ವೆಂಕಪ್ಪ ಗೌಡ, ಜಿನ್ನಪ್ಪ ಗೌಡ ಮಳವೇಲು, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ರಮೇಶ್ ಗೌಡ, ಅಮರನಾಥ ಗೌಡ, ಗಂಗಾಧರ ಗೌಡ, ಮನೋಹರ್ ರೈ, ಸೋಮಪ್ಪ ಗೌಡ, ಅಡಳಿತ ಮಂಡಳಿ ಸದಸ್ಯರಾದ ಡಾ.ಅನುಪಮ, ಸೀತಾರಾಮ ಪೂಜಾರಿ, ಟ್ರಸ್ಟಿನ ಕಾನೂನು ಸಲಹೆಗಾರ ದೀಕ್ಷಾ ವಾಮನ ಗೌಡ, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಅನಿಕಾ ಮತ್ತು ಬಳಗ ಪ್ರಾರ್ಥಿಸಿದರು. ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಮಳವೇಲು ವಂದಿಸಿದರು.

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಿಗೆ ಗಣಪತಿ ಹೋಮ ನಡೆಯಿತು. ವೈದಿಕ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top