ಬೆಂಗಳೂರು : ಈ ಬೇಸಿಗೆಯಲ್ಲಿ ಜನರಿಗೆ ವಿದ್ಯುತ್ ಲೋಡ್‌ಶೆಡ್ಡಿಂಗ್ ಚಿಂತೆ ಇಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕಂಡು ಮುಂದಿನ ಮೂರು ತಿಂಗಳ ಅವಧಿಗೆ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ.
ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಈ ಬೇಸಿಗೆಯಲ್ಲಿ ಜನರಿಗೆ ಲೋಡ್‌ಶೆಡ್ಡಿಂಗ್ ರಗಳೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ.
ಇದೀಗ ಬೇಸಿಗೆ ಆರಂಭವಾಗಿದ್ದು, ವಿದ್ಯುತ್ ಬಳಕೆಯೂ ಹೆಚ್ಚಾಗಿದೆ. ಈಗಾಗಲೇ ಪರೀಕ್ಷೆಗಳು ಆರಂಭವಾಗಿವೆ. ಹಾಗೆಯೇ ರೈತರಿಗೂ ಹೆಚ್ಚಿನ ವಿದ್ಯುತ್ ಪೂರೈಸುವ ಅಗತ್ಯವಿದೆ. ಬೇಸಿಗೆಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆ ಮಾಡುವಂತೆ ರೈತ ಪ್ರತಿನಿಧಿಗಳು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಮುಂದಿನ ಮೂರು ತಿಂಗಳ ಅವಧಿಗೆ ಬೇಕಾಗುವಷ್ಟು ವಿದ್ಯುತ್ ಬೇಡಿಕೆ ಕುರಿತು ಚಿಂತನೆ ನಡೆಸಿವೆ. ಹಾಗೆಯೇ ಬೇಡಿಕೆಗೆ ತಕ್ಕೆಂತೆ ವಿದ್ಯುತ್ ಖರೀದಿ ಮಾಡಿ ಗ್ರಾಹಕರಿಗೆ ಪೂರೈಸಲು ಎಸ್ಕಾಂಗಳು ನಿರ್ಧರಿಸಿವೆ.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಲು ಎಸ್ಕಾಂಗಳು ನಿರ್ಧರಿಸಿವೆ. ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ಇಂಧನ ಇಲಾಖೆಯು ಕೆಪಿಟಿಸಿಎಲ್ ಮತ್ತು ಸ್ಕಾಂಗಳಿಗೆ ಸೂಚನೆ ನೀಡಿದೆ.