ಕನ್ನಡದಲ್ಲೇ ಮಾತನಾಡಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವದ ಗಮನ ಸೆಳೆಯಲಿರುವ ರಿಷಬ್
ಬೆಂಗಳೂರು : ಕಾಂತಾರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಪ್ರಚಲಿತ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಮಾತನಾಡಲು ರಿಷಬ್ ಶೆಟ್ಟಿ ಆಯ್ಕೆಯಾಗಿದ್ದು, ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ವೇಳೆ ಅವರು ತಮ್ಮ ಸೂಪರ್ ಹಿಟ್ ಚಿತ್ರ ‘ಕಾಂತಾರ’ದ ಬಗ್ಗೆ ಮಾತನಾಡಲಿದ್ದಾರೆ. ಭಾರತೀಯ ಸಿನಿಮಾ ಬೆಳೆದು ಬಂದ ಬಗೆ, ದೇಶದ ಸಂಸ್ಕೃತಿ, ಪರಿಸರ ರಕ್ಷಣೆ ಹಾಗೂ ಇತರ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಕ್ಕೇ ಪರಿಚಯಿಸಿದ್ದರು. ಇದರ ಬಗ್ಗೆ ಅವರು ಮಾತನಾಡಿ, ದಕ್ಷಿಣ ಕನ್ನಡದ ವಿಶೇಷ ಸಂಸ್ಕೃತಿ, ದೈವಾರಾಧನೆಯ ವಿವರ ನೀಡುವ ನಿರೀಕ್ಷೆಯಿದೆ. ಜತೆಗೆ ಕಾಡಿನ ಜನರ ಬದುಕು ಬವಣೆಯ ಬಗ್ಗೆ ಇದರಲ್ಲಿ ವಿವರ ನೀಡಲಿದ್ದಾರೆ.
ಕಾಂತಾರ ಸಿನಿಮಾ ಮೂಲಕ ಕಾಡಂಚಿನ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೇ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯಲ್ಲಿ ತಮ್ಮತನ ಮೆರೆಯಲಿರುವ ರಿಷಬ್ ಶೆಟ್ಟಿ ಅಲ್ಲಿ ಕನ್ನಡದಲ್ಲಿಯೇ ಮಾತನಾಡಲಿರುವುದು ವಿಶೇಷ. ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಮಾತನಾಡಲಿರುವ ವಿಷಯವನ್ನು ಕರ್ನಾಟಕ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಮಾರ್ಚ್ 17 ರಂದು ತಮ್ಮ ಕಾಂತಾರ ಸಿನಿಮಾವನ್ನು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಪ್ರದರ್ಶನ ಸಹ ಮಾಡಲಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೆ ನಟ ರಿಷಬ್ ಶೆಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅರಣ್ಯ ಹಾಗೂ ಕಾಡಂಚಿನ ಜನರ ಸಮಸ್ಯೆಗಳ ನೀಗಿಸಿರೆಂದು ಮನವಿ ಮಾಡಿದ್ದರು. ಅವರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಸಿಎಂ ಅವರಿಗೆ ರಿಷಬ್ ನೀಡಿದ್ದರು.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಿತ್ತು. ದೈವಗಳ ಕುರಿತಾದ ಕತೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಅರಣ್ಯ ಇಲಾಖೆ ಹಾಗೂ ಕಾಡಂಚಿನಲ್ಲಿ ವಾಸಿಸುವ ಜನಗಳ ನಡುವಿನ ಸಂಘರ್ಷದ ಬಗ್ಗೆಯೂ ಚಿತ್ರಣವಿತ್ತು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ದಾಖಲೆಗಳನ್ನು ಮಾಡಿದ್ದು ಕೇವಲ ಹದಿನೈದು ಕೋಟಿಯಲ್ಲಿ ನಿರ್ಮಾಣವಾದ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಕಿಶೋರ್, ಅಚ್ಯುತ್ ಕುಮಾರ್ ಅವರುಗಳು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.