ವಾಸನೆ ತಡೆಯಲು 500 ಬಾಟಲಿ ಸೆಂಟ್ ಚಿಮುಕಿಸಿದ್ದಳು
ಮುಂಬಯಿ : ಮಗಳೇ ತಾಯಿಯನ್ನು ಕೊಂದು ಹೆಣವನ್ನು ಮೂರು ತಿಂಗಳು ಮನೆಯಲ್ಲಿಟ್ಟುಕೊಂಡ ಅಮಾನವೀಯ ಘಟನೆಯೊಂದು ಮುಂಬಯಿಯಲ್ಲಿ ಸಂಭವಿಸಿದೆ. ಮುಂಬಯಿಯ ಲಾಲ್‌ಬಾಗ್‌ನ ರಿಂಪಲ್ ಜೈನ್ (24) ಈ ಪಾಪಿ ಮಗಳು. ಕಳೆದ ಡಿಸೆಂಬರ್‌ನಲ್ಲಿ ಆಕೆ ತಾಯಿ ಬೀನಾ ಜೈನ್‌ರನ್ನು (55) ಕೊಲೆ ಮಾಡಿದ್ದಳು. ಬಳಿಕ ಶವವನ್ನು ಹಲವಾರು ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮನೆಯೊಳಗಿಟ್ಟಿದ್ದಳು.
ಬುಧವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿದೆ.
ಆರೋಪಿ ರಿಂಪಲ್ ಜೈನ್ ಹೆಣದ ವಾಸನೆ ಹೊರಗೆ ಬರಬಾರದೆಂದು 500ಕ್ಕೂ ಅಧಿಕ ಸೆಂಟಿನ ಬಾಟಲಿ ತಂದು ಚಿಮುಕಿಸಿದ್ದಳು. ಆದರೆ ಕೊಳೆತ ಹೆಣದ ವಾಸನೆಯನ್ನು ತಡೆಯಲು ಈ ಸೆಂಟಿನಿಂದಲೂ ಸಾಧ್ಯವಾಗಿಲ್ಲ. ರೋಮ್ ಫ್ರೆಶ್ನರ್, ಏರ್ ಫ್ಯೂರಿಫಯರ್ ಎಂದು ಕೊಲೆಯನ್ನು ಮುಚ್ಚಿ ಹಾಕಲು ಅವಳು ಸಾಕಷ್ಟು ಪ್ರಯತ್ನಿಸಿದ್ದಳು.
ಲಾಲ್‌ಬಾಗ್‌ನ ಇಬಾಹಿಂ ಕಸಮ್ ಎಂಬ ಚಾಳ್‌ನಲ್ಲಿ ವಾಸವಾಗಿರುವ ರಿಂಪಲ್ ತಾಯಿಯನ್ನು ಕೊಂದ ಬಳಿಕ ನೆರೆಮನೆಗಳ ಜತೆ ಮಾತು ಬಿಟ್ಟಿದ್ದಳು. ಯಾವಾಗ ನೋಡಿದರೂ ಚಾಳ್‌ನ ಕೋಣೆಯಲ್ಲಿ ಕಿಟಿಕಿ ಬಳಿ ನಿಂತು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ನೋಡುತ್ತಿದ್ದಳು. ಯಾರಾದರೂ ತಾಯಿ ಎಲ್ಲಿ ಎಂದು ಕೇಳಿದರೆ ಕಾನ್ಪುರಕ್ಕೆ ತೀರ್ಥಯಾತ್ರೆ ಹೋಗಿದ್ದಾರೆ ಎಂದು ಹೇಳುತ್ತಿದ್ದಳು.
ಕಳೆದ 16 ವರ್ಷಗಳಿಂದ ತಾಯಿ ಮತ್ತು ಮಗಳು ಇಬ್ಬರೇ ಮನೆಯಲ್ಲಿದ್ದರು. ತಂದೆ 2016ರಲ್ಲಿ ಗಂಭೀರ ಕಾಯಿಲೆಯಿಂದ ತೀರಿಕೊಂಡಿದ್ದರು. ಯಾವುದೇ ಆದಾಯ ಇಲ್ಲದ ಅವರಿಗೆ ತಂದೆಯ ಅಣ್ಣನೆ ಪ್ರತಿ ತಿಂಗಳು ಹಣ ಕೊಡುತ್ತಿದ್ದರು. ಹೀಗೆ ಪ್ರತಿ ತಿಂಗಳು ಕೊಡುವ ಹಣವನ್ನು ನೀಡಲೆಂದು ಬಂದಾಗ ಬೀನಾ ಜೈನ್ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಅನುಮಾನಗೊಂಡಿದ್ದರು. ಪಕ್ಕದ ಚಾಳ್‌ನಲ್ಲೇ ವಾಸವಾಗಿರುವ ಈ ಸಂಬಂಧಿಕ ಬಂದಾನ ರಿಂಪಲ್ ಮನೆ ಬಾಗಿಲನ್ನು ಪೂರ್ತಿ ತೆರೆದಿರಲಿಲ್ಲ. ಅವರ ಬಳಿ ತಾಯಿ ಕಾನ್ಪುರಕ್ಕೆ ಹೋಗಿದ್ದಾರೆ ಎಂದು ರಿಂಪಲ್ ಹೇಳಿದ್ದಳು. ಅವರು ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ ಬೀನಾ ಮೂರು ತಿಂಗಳಿಂದ ಕಾಣೆಯಾಗಿರುವ ವಿಚಾರ ತಿಳಿಯಿತು. ಆದರೆ ರಿಂಪಲ್ ಬಾಗಿಲು ತೆರೆಯಲು ಒಪ್ಪದ ಕಾರಣ ಬಲವಂತವಾಗಿ ಒಳಪ್ರವೇಶಿಸದಾಗ ಸಹಿಸಲು ಅಸಾಧ್ಯವಾದ ವಾಸನೆ ತುಂಬಿಕೊಂಡಿತ್ತು. ನಂತರ ಕಾಲಾಚೌಕಿ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಬಂದು ಶೋಧಿಸಿದಾಗ ಕಪಾಟಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪತ್ತೆಯಾಗಿದೆ.