ಎನ್.ಎಸ್.ಎಸ್.ನಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ | ಬೆಟ್ಟಂಪಾಡಿ ಕಾಲೇಜಿನ ಎನ್‌ಎಸ್ಎಸ್ ಶಿಬಿರ ಸಂಪನ್ನ ಸಮಾರಂಭದಲ್ಲಿ ರಾಧಾಕೃಷ್ಣ ಬೋರ್ಕರ್

ಪುತ್ತೂರು: ಎನ್ ಎಸ್ ಎಸ್ ನಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಯಶಸ್ವಿ ಮನುಷ್ಯರ ಯಶಸ್ಸಿನ ಗುಟ್ಟು ಸಮಯ ಪ್ರಜ್ಞೆ, ಒಬ್ಬ ವ್ಯಕ್ತಿಯು ಸಮಯವನ್ನು ಗೌರವಿಸದಿದ್ದರೆ ಸಮಯ ಅವನನ್ನು ಗೌರವಿಸುವುದಿಲ್ಲ. ಎನ್ಎಸ್ಎಸ್ ಸಮಯವನ್ನು ಗೌರವಿಸುವ ಪರಿಯನ್ನು ಕಲಿಸಿಕೊಡುತ್ತದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

ಅವರು ಮುಂಡೂರು ಶಾಲೆಯಲ್ಲಿ ಜರುಗಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬುದ್ಧಿವಂತರಾಗದೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಯುವಜನತೆ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದೆ.ಇಂತಹ ಸಂದರ್ಭದಲ್ಲಿ ಮೊಬೈಲ್ ರಹಿತ ಜೀವನವನ್ನು ಸುಗಮವಾಗಿ ನಡೆಸಬಹುದು ಎಂಬುದನ್ನು ಈ ಶಿಬಿರವು ಕಲಿಸಿಕೊಟ್ಟಿದೆ. ಕುಸಿಯುತ್ತಿರುವ ಅಂತರ್ಜಲ ಮಟ್ಟಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರ ನಿಟ್ಟಿನಲ್ಲಿ ಶಿಬಿರಾರ್ಥಿಗಳು ನಿರ್ಮಾಣ ಮಾಡಿದ ಇಂಗು ಗುಂಡಿಗಳು ಪ್ರಶಂಸನೀಯ. ಶಾಲಾ ಆವರಣದಲ್ಲಿ ನಡೆಸಿದ ಶ್ರಮದಾನವು ಶಾಲೆಯ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ ಎಂದರು.































 
 

ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಪವಿತ್ರ: ಆರ್.ಸಿ. ನಾರಾಯಣ್

ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಆರ್.ಸಿ. ನಾರಾಯಣ ಮಾತನಾಡಿ, ಎನ್ಎಸ್ಎಸ್ ಎಂಬುದು ಇತ್ತೀಚಿನ ದಶಕಗಳಲ್ಲಿ  ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದು ಸಂತಸದ ಸಂಗತಿ. ಎನ್ನೆಸ್ಸೆಸ್ ಘಟಕಗಳು ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಸಹಕಾರಿಯಾಗಿದೆ. ಪ್ರತಿಫಲಾಪೆಕ್ಷೆ ಇಲ್ಲದೆ ಮಾಡುವ ಸೇವೆ ಅತ್ಯಂತ ಪವಿತ್ರ ಎಂದರು.

ಶಿಬಿರದ ಅನುಭವ ಅವಿಸ್ಮರಣೀಯ: ವಾರಿಜಾ

ಮುಂಡೂರು ಶಾಲೆಯ ನಿವೃತ್ತ ಮುಖ್ಯಗುರು ವಾರಿಜಾ ಮಾತನಾಡಿ, ಒಬ್ಬ ವ್ಯಕ್ತಿಗೆ ತನ್ನ ಮನೆಯವರನ್ನು ಬಿಟ್ಟು ನಿಲ್ಲೋದು ಸವಾಲಿನ ಸಂಗತಿ ಆಗಿದೆ. ಈ ಶಿಬಿರವು ವಿದ್ಯಾರ್ಥಿಗಳಿಗೆ, ಊರವರಿಗೆ, ಶಿಬಿರಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಲವಾರು ವಿಷಯಗಳನ್ನು ಕಲಿಸಿಕೊಟ್ಟಿದೆ. ನಾವೆಲ್ಲರೂ ಅವಿಸ್ಮರಣೀಯ ಅನುಭವಗಳನ್ನು ಪಡೆದುಕೊಂಡಿದ್ದೇವೆ ಎಂದರು.

ವಿದ್ಯಾರ್ಥಿಗಳೇ ನಡೆಸುವ ಕಾರ್ಯಕ್ರಮ: ಶಿವಪ್ಪ ಪೂಜಾರಿ

ಪುತ್ತೂರು ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ ಮಾತನಾಡಿ, ಎನ್ ಎಸ್ ಎಸ್ ಬಹಳ ಪ್ರಮುಖವಾದ ಧ್ಯೇಯವೆಂದರೆ ಕಲಿಕೆಯ ಜತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವಂತೆ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮ ಆಗಿರುತ್ತದೆ ಎಂದರು.

ಶಿಬಿರದಿಂದ ಜೀವನ ಕೌಶಲ್ಯ ಪ್ರಾಪ್ತಿ: ರಾಧಾಕೃಷ್ಣ ಕೋಡಿ

ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಶಿಕ್ಷಕ ರಾಧಾಕೃಷ್ಣ ಕೋಡಿ ಮಾತನಾಡಿ, ಜೀವನ ಹಲವಾರು ಸವಾಲುಗಳನ್ನು ನಿಮ್ಮ ಮುಂದಿಡುತ್ತದೆ. ಅದಕ್ಕೆ ಹಿಂಜರಿಯದೆ ಕಠಿಣ ಪರಿಶ್ರಮದಿಂದ ಎದೆಗುಂದದೆ ಎದುರಿಸಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯಗಳನ್ನು ಮೈಗೂಡಿಸುವಲ್ಲಿ ಸಹಕಾರಿ ಆಗುವುದು ಹೊರತು ಶಿಬಿರ ನಡೆಸಿದ ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿಯೂ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಜೀವನದಲ್ಲಿ ಬದ್ಧತೆ ಉನ್ನತ ಹುದ್ದೆಗೆ ಅಡಿಪಾಯಯಾಗಿದೆ ಎಂದು ಹೇಳಿದರು.

ಕೃತಜ್ಞತಾ ಮಾತುಗಳನ್ನಾಡಿದ ಶಿಬಿರಾಧಿಕಾರಿ ಹರಿಪ್ರಸಾದ್ ಎಸ್., ಶಿಬಿರದ ಯಶಸ್ಸು ಶಾಲೆ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಯಿತು. ಈ ಸಹಕಾರ ಮುಂದೆಯೂ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಬಿರಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು. ಶಿಬಿರದ  ವರದಿಯನ್ನು ಘಟಕ 1 ಇದರ ನಾಯಕರಾದ ಶಿಬಿರಾರ್ಥಿಗಳಾದ ಕಿರಣ್ ಕೆ ಮತ್ತು ಅನನ್ಯ ಎಸ್ ವಾಚಿಸಿದರು. ಭಾವನ ಕೆ ಜೆ , ಶೃತಿಕಾ ಪಿ, ಧನ್ಯ ಶ್ರೀ, ಆದರ್ಶ್ ಬಿ, ಹರ್ಷಿತಾ ಕೆ ಶಿಬಿರದ ಅನುಭವ ಮತ್ತು ಕಲಿಕೆಗಳನ್ನು ಹಂಚಿಕೊಂಡರು. ಕೃತಜ್ಞತಾ ವರದಿಯನ್ನು ಘಟಕ 2 ಇದರ ನಾಯಕರಾದ ನಿತ್ಯಾನಂದ ಬಿ, ಪಲ್ಲವಿ ಬಿ ರೈ ವಾಚಿಸಿದರು. ತದನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ನಂತರದಲ್ಲಿ ಶಾಲಾ ಆವರಣದಲ್ಲಿ ನಡೆದ ಶಿಬಿರ ಜ್ಯೋತಿಯೊಂದಿಗೆ ಶಿಬಿರವು ಸಂಪನ್ನಗೊಂಡಿತು.

ಶಿಬಿರಾಧಿಕಾರಿಗಳಾದ ಹರಿಪ್ರಸಾದ್ ಎಸ್ ಸ್ವಾಗತಿಸಿ, ಶಿಬಿರಾರ್ಥಿಗಳಾದ ನವ್ಯಶ್ರೀ ವಂದಿಸಿದರು. ಅಂಕಿತ ಎ ಎಚ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top