ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು; ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಕುರಿತು ಪೂರ್ವಭಾವಿ ಸಭೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಉಪ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರುಗಳಿಗೆ ಅವರವರ ಜವಾಬ್ದಾರಿಗಳನ್ನು ತಿಳಿಸಿ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಎಲ್ಲರ ಸಹಕಾರವನ್ನು ಕೋರಲಾಯಿತು.

ಮಾ.21 ರಂದು ಪುತ್ತೂರಿನಲ್ಲಿ ಆಮಂತ್ರಣ ವಿತರಣೆ:































 
 

ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಪುತ್ತೂರು ನಗರದಲ್ಲಿ ಆಮಂತ್ರಣ ಪತ್ರಿಕೆಯನ್ನು ಮಾ.21 ರಂದು ವಿತರಿಸುವುದಾಗಿ ತೀರ್ಮಾನಿಸಲಾಯಿತು. ಬೆಳಿಗ್ಗೆ 9.30 ಕ್ಕೆ ಆಮಂತ್ರಣ ವಿತರಣೆ ಚಾಲನೆ ನೀಡಲಾಗುತ್ತಿದ್ದು ದರ್ಬೆ ವೃತ್ತದ ಬಳಿಯಿಂದ ಬೊಳುವಾರು ತನಕ ರಸ್ತೆಯ ಇಕ್ಕಲೆಗಳಲ್ಲಿ ಆಮಂತ್ರಣ ಪತ್ರಿಕೆ ವಿತರಿಸುವುದಾಗಿ ತೀರ್ಮಾನಿಸಿದರು.

ಬ್ರಹ್ಮಕಲಶೋತ್ಸವಕ್ಕೆ ಮಾ.25 ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಬ್ರಹ್ಮಕಲಶೋತ್ಸವ ಚಾಲನೆ ದೊರೆಯಲಿದೆ. ಹೊರೆಕಾಣಿಕೆ ಮೆರವಣಿಗೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಡಲಿದೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಕ್ತಾದಿಗಳು ತಮ್ಮ ತಮ್ಮ ವಾಹನಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಹಕರಿಸಬೇಕು. ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ಹೊರೆಕಾಣಿಕೆ ಸಂಗ್ರಹಕ್ಕೆ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು ಅಲ್ಲಿಂದ ವಾಹನಗಳಲ್ಲಿ ತುಂಬಿಸಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ಹೊರಟು ದೇವಸ್ಥಾನಕ್ಕೆ ಆಗಮಿಸಲಿದ್ದ. ಇದೇ ಸಂದರ್ಭದಲ್ಲಿ ದೇವರಿಗೆ ನೂತನವಾಗಿ ಸಮರ್ಪಣೆಯಾಗಲಿರುವ ಪುಷ್ಪ ರಥವು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಲಿದೆ ಎಂದು ಸುಜಯ್ ತಂತ್ರಿಯವರು ತಿಳಿಸಿದರು.

ಕೋಶಾಧಿಕಾರಿ ನವೀನ್ ರೈ ಶಿಬರ ಮಾತನಾಡಿ,ಅಭಿವೃದ್ಧಿ ಕಾಮಗಾರಿ ಹಾಗೂ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಬ್ರಹ್ಮಕಲಶೋತ್ಸವಕ್ಕೆ ಕೇವಲ 10 ದಿನಗಳು ಬಾಕಿಯಿದ್ದು, ಶೇ.80 ಆಮಂತ್ರಣ ವಿತರಿಸಲಾಗಿದೆ. ಧರ್ಮಸ್ಥಳದಿಂದ ರೂ.5ಲಕ್ಷ ದೇಣಿಗೆ ಬಂದಿದೆ. ಭಕ್ತಾದಿಗಳು ದೇಣಿಗೆ ನೀಡಿ ಸಹಕರಿಸಬೇಕು. ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆಯಲು ಭಕ್ತಾದಿಗಳು ಸಹಕರಿಸಬೇಕು. ಬ್ರಹ್ಮಕಲಶೋತ್ಸವದ ಸಿದ್ದತಾ ಕಾರ್ಯಗಳು ನಡೆಯುತ್ತಿದ್ದ ಭಕ್ತಾದಿಗಳು ಕರಸೇವೆಯಲ್ಲಿ ಸಹಕರಿಸುವಂತೆ ಅವರು ವಿನಂತಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಮಾತನಾಡಿ, 14 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವವು ವಿಜೃಂಭನೆಯಿಂದ ನಡೆದಿದೆ. ಈ ಸಾಳಿನ ಅಷ್ಟಬಂಧ ಬ್ರಹ್ಮಕಲಶೋತ್ಸವ ಇನ್ನಷ್ಟು ವಿಜೃಂಭಣೆಯಿಂದ ನಡೆಯಬೇಕು. ಈ ದೇವಸ್ಥಾನವು ಟ್ರಸ್ಟ್‌ನ ಮೂಲಕ ಊರಿನವರಿಂದ ನಡೆಯುವ ದೇವಸ್ಥಾನವಾಗಿದ್ದು ಪ್ರತಿಯೊಬ್ಬರು ನಮ್ಮ ಮನೆಯ ಕಾರ್ಯದಂತೆ ಎಲ್ಲಾ ಕಾರ್ಯಗಳಲ್ಲಿಯೋ ಸೇರಿಕೊಳ್ಳಬೇಕು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪ್ರತಿಯೊಂದು ವಿಭಾಗಗಳಲ್ಲಿಯೂ ಸ್ವಯಂ ಸೇವಕರ ಕೊರತೆಯಾಗದಂತೆ ಸಹಕರಿಸಬೇಕು ಎಂದರು.

ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ, ಸದಸ್ಯ ಪ್ರಸನ್ನ ಭಟ್ ಪಂಚವಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಂ. ಬೆಳಿಯಪ್ಪ ಗೌಡ ಕೆದ್ಕಾರ್, ಕಾರ್ಯದರ್ಶಿ ಯಂ.ಕೇಶವ ಪೂಜಾರಿ ಮುಕ್ವೆ, ಸದಸ್ಯರಾದ ಕೆ. ಗಿರೀಶ್ ರೈ ಮಣಿಯ, ಯಂ.ರವಿ ಮಣಿಯ, ಯಂ. ಸುಧೀರ್ ಹೆಬ್ಬಾರ್ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಅರ್ಚಕ ಪ್ರಸಾದ್ ಆಡಿಗ ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top