ಬೆಂಗಳೂರು : ರಾಜ್ಯ ಸರಕಾರಿ ನೌಕರರ ಬಳಿಕ ಇದೀಗ ವಿದ್ಯುತ್ ಇಲಾಖೆಯ ನೌಕರರು ಮುಷ್ಕರಕ್ಕೆ ತಯಾರಾಗಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಮಾ.16ರಂದು ಎಲ್ಲ ಎಸ್ಕಾಂಗಳ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವುದು ನಿಶ್ಚಿತ ಎಂದು ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ. ಇದರಿಂದ ವಿದ್ಯುತ್ ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಯಿದೆ.
ಕೆಪಿಟಿಸಿಎಲ್ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ(ಎಸ್ಕಾಂ) ಅಧಿಕಾರಿಗಳು, ನೌಕರರ ಬೇಡಿಕೆಗೆ ಈವರೆಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಬುಧವಾರ ತನಕ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಒಂದು ವೇಳೆ ವಿದ್ಯುತ್ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಮುಂದಾಗದಿದ್ದರೆ ಮಾ.16ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸುವುದು ಖಚಿತ. ಗ್ರಾಹಕರು ತಮ್ಮ ಸಮಸ್ಯೆಗಳು ಏನಿದ್ದರೂ ಬುಧವಾರವೇ ಇತ್ಯರ್ಥಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಗ್ರಾಹಕರಿಗೆ ಆಗುವ ತೊಂದರೆಗೆ ಸರ್ಕಾರವೇ ಹೊಣೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ಎಚ್.ಲಕ್ಷ್ಮಿಪತಿ ತಿಳಿಸಿದ್ದಾರೆ.
ವೇತನ ಪರಿಷ್ಕರಣೆಗೆ ಆಗ್ರಹಿಸಿ ಒಕ್ಕೂಟ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದೆ. ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ 14 ದಿನಗಳ ಮೊದಲೇ ನೋಟಿಸ್ ನೀಡಲಾಗಿದೆ. ಆದರೂ ಈವರೆಗೆ ಸರ್ಕಾರದಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಈಗಾಗಲೇ ನಿಗದಿಯಾಗಿರುವಂತೆ ಮಾ.16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ಮುಷ್ಕರದಿಂದ ರಾಜ್ಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಸುಮಾರು 62 ಸಾವಿರಕ್ಕೂ ಹೆಚ್ಚು ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ನೌಕರರು ಗ್ರಾಹಕರ ದೂರವಾಣಿ ಸಂಪರ್ಕಕ್ಕೆ ಲಭ್ಯವಿರುವುದಿಲ್ಲ. ಏಪ್ರಿಲ್ 2022ರಿಂದ ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಹಿಂದಿನ ನಿರ್ಧಾರದ ಪ್ರಕಾರ ನಮ್ಮ ಸಂಬಳವನ್ನು ಶೇ.22ರಷ್ಟು ಹೆಚ್ಚಿಸಬೇಕಿತ್ತು. ಈ ಪ್ರಸ್ತಾವನೆಯನ್ನು ಕೆಪಿಟಿಸಿಎಲ್ ಮಂಡಳಿ ಅನುಮೋದಿಸಿದೆ. ಆದರೆ, ಸರ್ಕಾರ ಅದಕ್ಕೆ ಒಪ್ಪಿಗೆ ನೀಡದೆ ಪ್ರಸ್ತಾವನೆಯನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಯೂನಿಯನ್ ಮತ್ತು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್ ಹೇಳಿದ್ದಾರೆ.
ಕೆಇಬಿ ಎಂಜಿನಿಯರುಗಳ ಸಂಘ, ಕೆಇವಿ ಎಸ್ಸಿ, ಎಸ್ಟಿನೌಕರರ ಕಲ್ಯಾಣ ಸಂಸ್ಥೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂಘ, ಕವಿಪ್ರನಿನಿ ಡಿಪ್ಲಮೊ ಇಂಜಿನಿಯರ್‌ಗಳ ಸಂಘ, ಕೆಪಿಟಿಸಿಎಲ್ ಮಾಜಿ ನೌಕರರ ಸಂಘ ಸೇರಿದಂತೆ ಕೆಪಿಟಿಸಿಎಲ್‌ನ ನೌಕರರ ಎಲ್ಲ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗುವುದಾಗಿ ಈಗಾಗಲೇ ಪ್ರಕಟಿಸಿವೆ.