ಸ್ವಪಕ್ಷದ ವಿರುದ್ಧವೇ ಶಾಸಕ ಉಮಾನಾಥ್ ಕೋಟ್ಯಾನ್ ಅವರು ನೀಡಿರುವ ಹೇಳಿಕೆಯ ವಿಡಿಯೋ ವೈರಲ್
ಮಂಗಳೂರು: ಸ್ವಪಕ್ಷದ ವಿರುದ್ಧವೇ ಶಾಸಕ ಉಮಾನಾಥ್ ಕೋಟ್ಯಾನ್ ಅವರು ನೀಡಿರುವ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲು ವೈರಲ್ ಆಗಿದ್ದು, ಆಕ್ಷೇಪಕ್ಕೆ ಎಡೆಮಾಡಿಕೊಟ್ಟಿದೆ.
ಮಂಗಳೂರು ಸಮೀಪದ ಕಿನ್ನಿಗೋಳಿ ಗ್ರಾಮದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿರುವ ಅವರು, ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲವೆಂದು ಪಕ್ಷದವರು ಹೇಳುತ್ತಾರೆ, ನಾವು ಯಾಕೆ ಮುಸ್ಲಿಮರ ಕೆಲಸ ಮಾಡಬೇಕು ಎಂದು ಹೇಳುತ್ತಾರೆ. ಆದರೆ, ನಾನು ಹಾಗಲ್ಲ, ಈ ಎರಡಕ್ಕೂ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ಮಸೀದಿ, ಮದರಸಾ ಹಾಗೂ ಚರ್ಚ್‌ಗಳ ಅಭಿವೃದ್ಧಿಗೆ ಹಣ ಸಿಗುವಂತೆ ಮಾಡಲು ಸಹಾಯ ಮಾಡಿದ್ದೇನೆ. ಇತ್ತೀಚೆಗಷ್ಟೇ ಕ್ಷೇತ್ರದ ಅಲ್ಪಸಂಖ್ಯಾತರ ಮಸೀದಿ ಮತ್ತು ಚರ್ಚ್ ಗಳಿಗೆ ಕೆಲಸ ಮಾಡಲು 5 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದು, ಮುಖ್ಯಮಂತ್ರಿಗಳು ರೂ.2.5 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಧರ್ಮವನ್ನು ಲೆಕ್ಕಿಸದೆ ಸೇವೆ ಮಾಡುವ ವ್ಯಕ್ತಿಯನ್ನು ನೀವು ಬೆಂಬಲಿಸಬೇಕು ಎಂದು ಹೇಳಿದ್ದಾರೆ
ಕಳೆದ 5 ವರ್ಷಗಳಲ್ಲಿ ನನ್ನ ಕ್ಷೇತ್ರದಲ್ಲಿ ಯಾವುದೇ ಕೋಮು ಹಿಂಸಾಚಾರ ಅಥವಾ ದ್ವೇಷದ ಭಾಷಣಗಳು ಕಂಡುಬಂದಿಲ್ಲ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರಿಗೆ ಕೆಲಸ ಸಿಗುತ್ತಿಲ್ಲ ಎಂಬ ಮಾತನ್ನು ಕೇಳಿದ್ದೀರಾ? ನಾನು ಯಾವುದೇ ರೀತಿಯ ತಾರತಮ್ಯವನ್ನು ಮಾಡುವುದಿಲ್ಲ. ನಿಮಗೆ ಏನಾದರೂ ಬೇಕಾದರೆ ನನ್ನ ಬಳಿಗೆ ಬನ್ನಿ. ನಾನು ಮತ ಕೇಳುವುದಿಲ್ಲ. ಆದರೆ, ಸೇವೆ ಮಾಡುವವರಿಗೆ ಮತ ನೀಡಬೇಕೆಂಬುದಷ್ಟೇ ನನ್ನ ವಿನಂತಿ. ಪಕ್ಷವನ್ನು ನೋಡಬೇಡಿ. ನಾನು ನಿಮಗಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಹಕ್ಕಾಗಿರುವ ವೇತನವನ್ನು ನಾನು ಕೇಳುತ್ತಿದ್ದೇನೆಂದು ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಉಮಾನಾಥ್ ಅವರ ಹೇಳಿಕೆಯನ್ನು ಕೆಲ ಬಿಜೆಪಿ ಶಾಸಕರು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಮುಸ್ಲಿಮರ ಮನವೊಲಿಸಲು ಇಂತಹ ಪ್ರಯತ್ನ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಹೇಳಿಕೆ ಸಂಬಂಧ ಉಮಾನಾಥ್ ಕೋಟ್ಯಾನ್ ಅವರನ್ನು ಸಂಪರ್ಕಿಸಲಾಗಿದ್ದು, ಈ ವೇಳೆ ಉಮಾನಾಥ್ ಅವರು ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಂಪೂರ್ಣ ವಿಡಿಯೋವನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ