ಬೆಂಗಳೂರು: ಎಲ್ಲ ಶಾಸಕರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹಿರಿಯ ನಾಯಕ ಯಡಿಯೂರಪ್ಪ ಖಡಕ್ ಅಗಿ ಹೇಳಿದ ಬಳಿಕ ಬಿಜೆಪಿಯ ಹಲವು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಕರಾವಳಿಯಲ್ಲೂ ಕೆಲವು ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.
ಬಿಜೆಪಿ ಕರ್ನಾಟಕದಲ್ಲೂ ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯ ಪ್ರಯೋಗಕ್ಕೆ ಮುಂದಾದರೆ ಹಾಲಿ ಇರುವ ಹಲವು ಶಾಸಕರು ಟಿಕೆಟ್ ಕಳೆದುಕೊಳ್ಳುವುದು ಖಚಿತ. ಉತ್ತರ ಪ್ರದೇಶ ಮತ್ತು ಗುಜರಾತಿನಲ್ಲಿ ನಿಷ್ಕ್ರಿಯ, ಹಿರಿಯ ಮತ್ತು ಹೆಸರು ಕೆಡಸಿಕೊಂಡಿದ್ದ ಶಾಸಕರನ್ನು ಮತ್ತು ಸಚಿವರನ್ನು ಕೂಬಿಟ್ಟು, ಇದರ ಬದಲಾಗಿ ಯುವಕರಿಗೆ ಆದ್ಯತೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿ ಎರಡೂ ರಾಜ್ಯಗಳಲಿ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಇದೇ ಪ್ರಯೋಗ ಕರ್ನಾಟಕದಲ್ಲೂ ಮಾಡಬೇಕೆಂಬ ಇಚ್ಚೆ ಅಮಿತ್ ಶಾ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಸಭೆಯ ಮೇಲೆ ಸಭೆಗಳು ನಡೆಯುತ್ತಿವೆ.
ಅಮಿತ್ ಶಾ ನೇತೃತ್ವದಲ್ಲಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಕುರಿತು, ಈಚೆಗೆ ಮೊದಲ ಹಂತದ ಸಭೆಯೊಂದು ನಡೆದಿದೆ. ಕರಾವಳಿ ಜಿಲ್ಲೆಗಳಲ್ಲೂ ಕೆಲವರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಎದುರಾಗಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಆಯ್ದ ಕೆಲವೇ ವ್ಯಕ್ತಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಆಡಳಿತ ವಿರೋಧಿ ಅಲೆ ಹಾಗೂ ಕ್ಷೇತ್ರ ವಿದ್ಯಮಾನಗಳು ಹಾಗೂ ಸಮೀಕ್ಷಾವಾರು ಶಾಸಕರ ಬಗ್ಗೆ ಇರುವ ಪ್ರತಿ ವರದಿ ಆಧರಿಸಿ ಚರ್ಚೆ ನಡೆದಿದೆ.
ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಕೆಲವು ದಿನಗಳ ಹಿಂದೆಯೇ ಹೇಳಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಪ್ರತಿ ತಿಂಗಳು ಅಮಿತ್ ಶಾ ರಾಜ್ಯದ ಬೆಳವಣಿಗೆಗೆ ಸಂಬಂಧಪಟ್ಟಂತೆ ವರದಿ ತರಿಸಿಕೊಂಡು ಎಲ್ಲ ವಿಧಾನಸಭಾ ಕ್ಷೇತ್ರಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ ಶಾಸಕರಿಗೆ ವಿರೋಧಿ ಅಲೆ ಇರುವುದು ದೃಢಪಟ್ಟಿದೆ. ಜತೆಗೆ ವಿಭಾಗೀಯ ಪ್ರಮುಖರಿಂದ ಪ್ರತ್ಯೇಕ ವರದಿ ಸಂಗ್ರಹಕ್ಕೂ ಪಕ್ಷ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.