ಪುತ್ತೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವವಾದದ್ದು, ಇದಕ್ಕಾಗಿ ತಾಯಂದಿರು ಪಣ ತೊಡಬೇಕು ಎಂದು ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್ ಹೇಳಿದರು.
ರೋಟರಿ ಕ್ಲಬ್ ಪುತ್ತೂರು, ಇನ್ನರ್‌ವೀಲ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಇಲ್ಲಿನ ಎಪಿಎಂಸಿ ರಸ್ತೆಯ ಸಾಯ ಎಂಟರ್‌ಪ್ರೈಸಸ್ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳಾ ದಿನಾಚರಣೆ ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. ಸಮಾಜದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮಹಿಳೆಯರಿಗೆ ನಿತ್ಯವೂ ಮಹಿಳಾ ದಿನಾಚರಣೆಯೇ ಆಗಿರುತ್ತದೆ. ಕುಟುಂಬ ನಿರ್ವಹಣೆಯ ಜತೆಗೆ ಸಮಾಜದ ಆಗುಹೋಗುಗಳನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗೆ ಇದೆ. ಮಹಿಳೆಯರನ್ನು ಗೌರವದಿಂದ ಕಾಣಬೇಕಾಗಿದ್ದು, ದೇಶದ ಅಭಿವೃದ್ಧಿಗೆ ಮಹಿಳಾ ಶಕ್ತಿಯ ಕೊಡುಗೆ ಬಹಳಷ್ಟಿದೆ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಅನೇಕ ರಂಗಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಂತಹ ಮಹಿಳೆಯರನ್ನು ಸಮಾಜದ ಎಲ್ಲರೂ ಗೌರವದಿಂದ ಕಾಣಬೇಕು, ಮಹಿಳೆಯರ ಸಾಧನೆಯನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ನೃತ್ಯ ಕ್ಷೇತ್ರದ ಸಾಧನೆಗೆ ಶಾಲಿನಿ ಆತ್ಮಭೂಷಣ್ ಅವರನ್ನು ಗೌರವಿಸಲಾಯಿತು. ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ವೀಣಾ ಕೊಳತ್ತಾಯ ಮತ್ತು ಬಾಲಕೃಷ್ಣ ಕೊಳತ್ತಾಯ ಹಾಗೂ ಅವರ ಪುತ್ರ ಗುರುರಾಜ ಕೊಳತ್ತಾಯ ಮತ್ತು ಕವಿತಾ ಕೊಳತ್ತಾಯರನ್ನು ಗೌರವಿಸಲಾಯಿತು. ಲಕ್ಕಿ ಮಹಿಳಾ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆರಿಸಲಾಯಿತು.
ಅನಾರೋಗ್ಯಪೀಡಿತ ವ್ಯಕ್ತಿಯೊಬ್ಬರಿಗೆ ರೋಟರಿ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಶ್ರೀಪ್ರಕಾಶ್ ಅವರು ರೋಟರಿ ಕ್ಲಬ್‌ನ ಚಟುವಟಿಕೆಗಳ ಮಾಹಿತಿ ನೀಡಿದರು. ಇನ್ನರ್‌ವೀಲ್ ಸದಸ್ಯೆ ಸಂಧ್ಯಾ ಸಾಯ ಪರಿಚಯಿಸಿದರು. ರೊಟೇರಿಯನ್ ಗೋವಿಂದ ಪ್ರಕಾಶ್ ಸಾಯ ವಂದಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ಟೈನಿ ದೀಪಕ್ ಉಪಸ್ಥಿತರಿದ್ದರು. ಬಳಿಕ ನೃತ್ಯೋಪಾಸನಾ ಕಲಾಕೇಂದ್ರದ ವಿದ್ಯಾರ್ಥಿಗಳಿಂದ `ನೃತ್ಯೋಹಂ’ ಭರತನಾಟ್ಯ ವೈವಿಧ್ಯ ಪ್ರದರ್ಶನಗೊಂಡಿತು.