ಕಾವು: ಇಲ್ಲಿನ ನವೋದಯ ಒಕ್ಕೂಟದ ಎಲ್ಲಾ ಗುಂಪುಗಳ ಪುರುಷ ಸದಸ್ಯರಿಗೆ ಮಂಗಳೂರು ನವೋದಯ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಸಮವಸ್ತ್ರ ವಿತರಿಸಿ ಮಾತನಾಡಿ, ಎಲ್ಲಾ ಗುಂಪುಗಳು ಪಾರದರ್ಶಕವಾಗಿ ಹಣಕಾಸಿನ ವ್ಯವಹಾರ ಮಾಡುತ್ತಾ ಸ್ವಾವಲಂಬಿಯ ಕಡೆ ಬರಬೇಕು. ಒಂದೂ ಕಲೆಯಿಲ್ಲದ ಬಿಳಿ ವಸ್ತ್ರವೂ ಹೇಗೆ ಶುಭ್ರತೆಯನ್ನು ತೋರಿಸುತ್ತದೆಯೋ ಹಾಗೆ ನವೋದಯ ಸದಸ್ಯರ ವ್ಯವಹಾರವೂ ಕಪ್ಪು ಚುಕ್ಕೆಯಿಲ್ಲದ ಬಟ್ಟೆಯಂತಿರಬೇಕು ಎಂದರು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ ಮಾತನಾಡಿ, ನವೋದಯ ಸದಸ್ಯರ ಬೇಡಿಕೆಗಳಿಗೆ ನಾವು ಸದಾ ಸ್ಪಂದಿಸುತ್ತಿದ್ದು, ಸದಸ್ಯರು ಕೂಡ ನಮ್ಮ ಸಂಘದಲ್ಲಿ ಇನ್ನೂ ಹೆಚ್ಚು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು.


ನವೋದಯ ಟ್ರಸ್ಟಿನ ಪುತ್ತೂರು ವಲಯ ಮೇಲ್ವೀಚಾರಕ ಚಂದ್ರಶೇಖರ್ ಮಾತನಾಡಿ, ಟ್ರಸ್ಟಿನಿಂದ ಪ್ರತೀ ಐದು ವರ್ಷಕ್ಕೊಮ್ಮೆ ನವೋದಯ ಸದಸ್ಯರಿಗೆ ಸಮವಸ್ತ್ರವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ರಾಜೇಂದ್ರ ಕುಮಾರ್ ಅವರ ಅಪೇಕ್ಷೆಯಂತೆ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳ ಪಾಲುದಾರಿಕೆಯೊಂದಿಗೆ ವಿತರಿಸಲಾಗುತ್ತಿದೆ ಎಂದರು.
ಕಾವು ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಕಾವು ವಲಯ ಪ್ರೇರಕಿ ಮಾಧವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 104 ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷೆ ಸುಮತಿ, ಕೋಶಾಧಿಕಾರಿ ಇಬ್ರಾಹಿಂ, ಗೌರವಾಧ್ಯಕ್ಷ ಅಮ್ಮು ಪೂಂಜ ಸೇರಿದಂತೆ ಎಲ್ಲಾ ಗುಂಪಿನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಮತ ರಾವ್ ಪ್ರಾರ್ಥಿಸಿದರು. ಸುಬ್ರಾಯ ಗೌಡ ಸ್ವಾಗತಿಸಿ, ಮಾಧವಿ ವಂದಿಸಿದರು. ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.