ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 12 ಬೂತುಗಳನ್ನು ಮಾದರಿ ಬೂತುಗಳೆಂದು ಗುರುತಿಸಲಾಗಿದ್ದು, ಚುನಾವಣೆಯ ದಿನ ವಿಶೇಷ ಅಲಂಕಾರ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾದ 12 ಬೂತುಗಳನ್ನು ವಿಶೇಷ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಆ ಮತಗಟ್ಟೆಗಳಲ್ಲಿ ಈ ಬಾರಿ ಹೆಚ್ಚಿನ ಮತದಾನ ಆಗುವ ನಿಟ್ಟಿನಲ್ಲಿ ಸಖಿ, ಯಕ್ಷಗಾನ, ಕಂಬಳ, ನೀಲತರಂಗ, ಪರಂಪರೆ, ಗೋ ಗ್ರೀನ್, ಯುವ, ವಿಕಲಚೇತನ ಎಂದು ಗುರುತಿಸಿ, ವಿಶೇಷ ಅಲಂಕಾರ ಮಾಡಲಾಗುವುದು ಎಂದು ವಿವರಿಸಿದರು.
ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯ ಮುಂದುವರಿದಿದ್ದು, ಇದುವರೆಗೆ 208272 ಮತದಾರರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ ಎನ್ನುವುದು ದಾಖಲಾಗಿದೆ. ಚುನಾವಣೆವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯ ಮುಂದುವರಿಯಲಿರುವುದರಿಂದ, ಇನ್ನಷ್ಟು ಸೇರ್ಪಡೆ ಆಗುವ ಸಾಧ್ಯತೆ ಇದೆ ಎಂದರು.
ಹಿರಿಯರಿಗೆ ಮನೆಯಲ್ಲೇ ಮತದಾನ:
ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದೇ ಹೇಳಲಾಗಿದೆ. ಆದ್ದರಿಂದ ಆ ಹಬ್ಬದಲ್ಲಿ ಪ್ರತಿಯೋರ್ವ ಮತದಾರರು ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಅವರ ಮನೆಗಳಿಗೇ ತೆರಳಿ ಮತದಾನ ಮಾಡಿಸಲಾಗುವುದು. ಇದಕ್ಕಾಗಿ ಬಿ.ಎಲ್.ಓ.ಗಳು ಮೊದಲೇ ಅವರಿಂದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು. ಅಂಗವಿಕಲರಿಗೂ ಇದೇ ರೀತಿಯಲ್ಲಿ ಮತದಾನ ನಡೆಸುವ ಬಗ್ಗೆ ಸೂಚಿಸಲಾಗಿದೆ. ಇದರ ಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.
ಚುನಾವಣಾ ಪೂರ್ವ ತರಬೇತಿ:
2023ರ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ತರಬೇತಿಗಳನ್ನು ನಡೆಸಲಾಗಿದೆ. ಜನಪ್ರತಿನಿಧಿಗಳಿಗೂ ಮಾಹಿತಿ ನೀಡಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ತರಬೇತಿ ಪೂರ್ಣಗೊಂಡಿದೆ. ವಿವಿಪ್ಯಾಟ್ ಮೆಷಿನ್ ಮೂಲಕ ಮತದಾರರಿಗೆ ಅಣುಕು ಪ್ರದರ್ಶನ ನೀಡುವ ಕಾರ್ಯವೂ ನಡೆದಿದೆ. ಕಡಿಮೆ ಮತದಾನವಾದ ಪ್ರದೇಶಗಳಿಗೆ ತೆರಳಿ, ಅಲ್ಲಿಯೂ ಅಣುಕು ಪ್ರದರ್ಶನ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಸಂತೆ, ಗ್ರಾ.ಪಂ. ಆವರಣ ಮೊದಲಾದ ಪ್ರದೇಶಗಳನ್ನು ಆಯ್ದುಕೊಳ್ಳಲಾಗುವುದು ಎಂದು ಗಿರೀಶ್ ನಂದನ್ ಮಾಹಿತಿ ನೀಡಿದರು.
ಮತಗಟ್ಟೆಗಳ ಪರಿಶೀಲನೆ ಪೂರ್ಣ:
ಮತದಾನ ನಡೆಯಲಿರುವ ಮತಗಟ್ಟೆಗಳ ಪರಿಶೀಲನೆ ಕಾರ್ಯ ಪೂರ್ಣಗೊಳಿಸಲಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಇರುವಲ್ಲಿ, ಅವುಗಳನ್ನು ಸರಿಪಡಿಸಲು ಪಿಡಿಓಗಳಿಗೆ ಸೂಚಿಸಲಾಗಿದೆ. ರ್ಯಾಂಪ್, ವಿದ್ಯುತ್, ನೀರಿನ ವ್ಯವಸ್ಥೆ, ಕೊಠಡಿ ಡ್ಯಾಮೇಜ್, ಸೋರಿಕೆ ಮೊದಲಾದ ವಿಚಾರಗಳ ಬಗ್ಗೆ ಗಮನ ಕೊಡಲಾಗಿದೆ. ರಿಪೇರಿ ಕಾರ್ಯ ಶುರುವಾಗಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಪಂ ಇಓ ನವೀನ್ ಕುಮಾರ್ ಭಂಡಾರಿ, ಮುಖ್ಯ ತರಬೇತುದಾರರಾದ ಪ್ರಶಾಂತ್ ಪೈ, ಹರಿಶಂಕರ್, ಹರಿಪ್ರಸಾದ್ ಉಪಸ್ಥಿತರಿದ್ದರು.