ಬೆಂಗಳೂರು : ನನ್ನ ಮೇಲೆ ಐಟಿ, ಇ.ಡಿ. ದಾಳಿ ನಡೆಯಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರಣ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಡಿಕೆಶಿ, ದೇವೇಗೌಡ ಮತ್ತು ಕುಮಾರಸ್ವಾಮಿ ಹಣ, ಆಸ್ತಿ ಮಾಡಿಲ್ವಾ? ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇವೆಲ್ಲಾ ಅವರಿಗೆ ನೆನಪಾಗುತ್ತಿಲ್ಲ. ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ಸಂಪುಟದಿಂದ ಹೊರಗಿಡಲು ಜೆಡಿಎಸ್ ವರಿಷ್ಠರೇ ಕಾರಣ. ದೇವೇಗೌಡರು ಪ್ರಧಾನಿಯಾದ ವೇಳೆ ಜೆಡಿಎಸ್ ಪಕ್ಷದಿಂದ 16 ಮಂದಿ ಗೆದ್ದಿದ್ದ ಸಂಸದರಲ್ಲಿ ಒಬ್ಬರು ಕೂಡ ಆ ಪಕ್ಷದಲ್ಲಿ ಉಳಿದಿಲ್ಲ ಏಕೆ ಎಂದು ಪ್ರಶ್ನಿಸಿದರು.
ಜೆಡಿಎಸ್-ಬಿಜೆಪಿ ಒಂದೇ, ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಬಂದು ಜೆಡಿಎಸ್ ಬಗ್ಗೆ ಒಂದು ಮಾತು ಆಡಿಲ್ಲ, ಮಂಡ್ಯ ಜಿಲ್ಲೆಯಲ್ಲಿ 7, ರಾಮನಗರ ಜಿಲ್ಲೆಯಲ್ಲಿ 3, ಮೈಸೂರು ಜಿಲ್ಲೆಯಲ್ಲಿ 4 ಮಂದಿ ಜೆಡಿಎಸ್ ಶಾಸಕರಿದ್ದರೂ ಪ್ರಧಾನಿ ಒಂದು ಮಾತುಗಳನ್ನು ಆಡದಿರುವುದು ಜನರಲ್ಲಿ ಜೆಡಿಎಸ್-ಬಿಜೆಪಿ ಒಂದು ಎಂಬ ಭಾವನೆ ಮೂಡಿದೆ. ಅವರು ಕಾಂಗ್ರೆಸ್ ಪಕ್ಷವನ್ನು ಹಾಗೂ ನಮ್ಮ ನಾಯಕರ ಬಗ್ಗೆ ಮಾತನಾಡಿರುವುದು ನಮ್ಮ ಪಕ್ಷ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿದೆ. ಆದ್ದರಿಂದ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಇದು ರಾಜ್ಯದ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಗೊತ್ತು. ಹಾಗಿದ್ದರೆ ಅರಸೀಕೆರೆ ಶಿವಲಿಂಗೇಗೌಡ, ವೈ.ಎಸ್.ವಿ.ದತ್ತ, ಮಂಜುನಾಥ ಗೌಡ, ಶ್ರೀನಿವಾಸಗೌಡ ಹೀಗೆ ಹಲವರೇಕೆ ಆ ಪಕ್ಷವನ್ನು ಬಿಡುತ್ತಿದ್ದರು ಎಂದರು.