ಲಾಸ್ ಏಂಜಲೀಸ್: ಭಾರತದ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ 95ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದಿದೆ.
ಪ್ರಶಸ್ತಿಯನ್ನು ಪೆಡ್ರೊ ಪಾಸ್ಕಲ್ ಪ್ರದಾನ ಮಾಡಿದರು. ‘ಹೌಲೌಟ್’, ‘ಹೌ ಡು ಯು ಮೆಷರ್ ಎ ಇಯರ್?’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಮತ್ತು ‘ಸ್ಟ್ರೇಂಜರ್ ಅಟ್ ದಿ ಗೇಟ್’ ಜತೆಗೆ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿತ್ತು. ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ ಪ್ರಶಸ್ತಿ ಸ್ವೀಕರಿಸಿದರು. ಕಾರ್ತಿಕಿ ಚಿತ್ರದ ಬಗ್ಗೆ ಮಾತನಾಡಿ, ಇದು ಸಹಬಾಳ್ವೆಗಾಗಿ ಮತ್ತು ತಮ್ಮ ಕೆಲಸವನ್ನು ಗುರುತಿಸಿದ್ದಕ್ಕಾಗಿ ಆಸ್ಕರ್ ಸಂಸ್ಥೆಗೆ ಧನ್ಯವಾದ ಎಂದರು. ಈ ಸಾಕ್ಷ್ಯಚಿತ್ರವು ದಂಪತಿ ಮತ್ತು ಅವರ ಆರೈಕೆಗೆ ಒಪ್ಪಿಸಲಾದ ಅನಾಥ ಮರಿ ಆನೆ ರಘು ಅವರ ನಡುವೆ ಬೆಳೆಯುವ ಬಾಂಧವ್ಯದ ಕುರಿತಾಗಿದೆ.
ಇದು ಭಾರತೀಯ ಕಿರು ಚಿತ್ರವೊಂದಕ್ಕೆ ಸಿಕ್ಕಿರುವ ಮೊದಲ ಆಸ್ಕರ್ ಪ್ರಶಸ್ತಿ. ಇಬ್ಬರು ಮಹಿಳೆಯರು ತಯಾರಿಸಿದ ಚಿತ್ರವೊಂದು ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡು ದಾಖಲೆ ಮಾಡಿದೆ. ಇದನ್ನು ಇನ್ನೂ ನಂಬಲಾಗುತ್ತಿಲ್ಲ, ನನ್ನ ಮೈ ಈಗಲೂ ನಡುಗುತ್ತಿದೆ ಎಂದು ಗುಣೀತ್ ಮೊಂಗಾ ಹೇಳಿದ್ದಾರೆ. 41 ನಿಮಿಷ ಅವಧಿಯ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಸಿಗುತ್ತದೆ.