ಪುತ್ತೂರು: ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಆತ್ಮೀಕ ಕುಟುಂಬಸ್ಥರಿಗೆ ನೆರವು ನೀಡಬೇಕೆಂಬ ಬೇಡಿಕೆ ಮುಂದಿರಿಸಿ ಪ್ರತಿಭಟನೆನಿರತ ದಲಿತ್ ಸೇವಾ ಸಮಿತಿ ಸದಸ್ಯರು, ಶಾಸಕ ಸಂಜೀವ ಮಠಂದೂರು ಭರವಸೆಯ ಮಾತಿನ ಬಳಿಕ ಪ್ರತಿಭಟನೆ ವಾಪಾಸ್ ಪಡೆದರು.
ಸೋಮವಾರ ತಾಲೂಕು ಆಡಳಿತ ಸೌಧ ಮುಂಭಾಗ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬನ್ನೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಹಾಗೂ ವಿಟ್ಲ ಕಸಬಾ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಭವನಕ್ಕೆ 2 ಕೋಟಿ ರೂ. ಅನುದಾನ ಒದಗಿಸುವಂತೆ ಬೇಡಿಕೆ ಮುಂದಿಟ್ಟಿದ್ದರು. ಅಲ್ಲದೇ, ಕನ್ಯಾನ ಗ್ರಾಮದ ಆತ್ಮೀಕಾ ಎಂಬ ವಿದ್ಯಾರ್ಥಿನಿಯ ಸಾವಿನ ಹಿನ್ನೆಲೆಯಲ್ಲಿ 10 ಲಕ್ಷ ರೂ. ನೀಡುವಂತೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂಬ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದರು.
ಫೆ. 27ರಂದು ಒಂದು ದಿನದ ಸತ್ಯಾಗ್ರಹ ನಡೆಸಿದ್ದು, ಮಾರ್ಚ್ 13ರಂದು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಿರತರಾಗಿದ್ದರು.
ಪುತ್ತೂರಿಗೆ ಸುಸಜ್ಜಿತ ಅಂಬೇಡ್ಕರ್ ಭವನ: ಶಾಸಕ ಸಂಜೀವ ಮಠಂದೂರು
ಸ್ಥಳಕ್ಕಾಗಮಿಸಿದ ಶಾಸಕ ಸಂಜೀವ ಮಠಂದೂರು ಅವರು ಪ್ರತಿಭಟನಾನಿರತರನ್ನು ಉದ್ದೇಶಿಸಿ, ನಿಮಗೆಲ್ಲಾ ತಿಳಿದಿರುವಂತೆ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ 4 ಅಂಬೇಡ್ಕರ್ ಭವನ ಮಂಜೂರಾಗಿದೆ. ಇದಕ್ಕಾಗಿ ತಲಾ 20 ಲಕ್ಷ ರೂ. ಅನುದಾನವೂ ಬಿಡುಗಡೆಗೊಂಡಿದೆ. ತಾಲೂಕು ಮಟ್ಟದ ಅಂಬೇಡ್ಕರ್ ಭವನಕ್ಕೆ 50 ಲಕ್ಷ ರೂ.ವನ್ನು ಸರಕಾರ ಮಂಜೂರು ಮಾಡುತ್ತದೆ. ಈ ಅನುದಾನ ಮಂಜೂರಾಗಿದ್ದು, ಪುತ್ತೂರಿನಲ್ಲಿ ಸುವ್ಯವಸ್ಥಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂಬುದು ನಮ್ಮ ಕನಸು. ಇದಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಯೂ ಅಗತ್ಯ. ಇಷ್ಟೆಲ್ಲಾ ವ್ಯವಸ್ಥೆ ಕಲ್ಪಿಸಬೇಕಿದ್ದರೆ, ದೊಡ್ಡ ಅನುದಾನದ ಅಗತ್ಯವಿದೆ. ಈಗಾಗಲೇ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೂ ಮನವಿ ನೀಡಲಾಗಿದೆ. ಜೊತೆಗೆ ಸರಕಾರದ ಹಂತದಲ್ಲೂ ಮಾತುಕತೆ ನಡೆಯುತ್ತಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಕ್ರಿಯೆ ಸ್ವಲ್ಪ ನಿಧಾನವಾಗುತ್ತಿದೆ ಎಂದರು.
ಶೀಘ್ರ ದಿನ ನಿಗದಿ:
ವಿಟ್ಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಭವನಕ್ಕೆ ಯಾವುದೇ ತೊಂದರೆಯಿಲ್ಲ. ಅನುದಾನವೂ ಮಂಜೂರಾಗಿದೆ. ಇದಕ್ಕೆ ಸ್ವಲ್ಪ ಅನುದಾನವನ್ನು ತಾನು ಸೇರಿಸುತ್ತೇನೆ. ಶೀಘ್ರದಲ್ಲಿ ಸಾಧ್ಯವಾದರೆ ವಾರದೊಳಗೆ ಶಿಲಾನ್ಯಾಸ ನಡೆಸಲು ದಿನ ನಿಗದಿ ಮಾಡಲು ಸೂಚಿಸುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆತ್ಮೀಕ ಕುಟುಂಭಿಕರಿಗೆ ಮಾನವೀಯ ಸ್ಪಂದನೆ:
ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಆತ್ಮೀಕ ಸಾವಿನ ಸಂದರ್ಭ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಕೇಳಿಕೊಂಡಾಗ ಪ್ರತಿಕ್ರಿಯಿಸಿದ ಶಾಸಕರು, ಮಾನವೀಯ ನೆಲೆಯಲ್ಲಿ ಆತ್ಮೀಕಾ ಕುಟುಂಭಿಕರಿಗೆ ಸ್ಪಂದನೆ ನೀಡುತ್ತೇನೆ ಎಂದು ತಿಳಿಸಿದ್ದೇನೆ. ಅದರಂತೆ ತಾನು ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ಉಳಿಪ್ಪಾಡಿಗುತ್ತು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಇಂತಹ ಘಟನೆಗಳಿಗೆ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಮಂಜೂರಾಗುವುದು ಕಷ್ಟವೇ. ಆದ್ದರಿಂದ ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಮಾತುಕತೆ ನಡೆಸಿ, ಪರಿಹಾರ ಕಲ್ಪಿಸಬೇಕಾಗುತ್ತದೆ. ಈ ಪ್ರಕ್ರಿಯೆಯೂ ನಡೆಯುತ್ತಿದೆ.
ಈ ಹಿಂದೆ ಕಾಸರಗೋಡಿನ ಬಸ್ಸೊಂದು ಅಪಘಾತಕ್ಕೀಡಾಗಿ, 7 ಮಂದಿ ದುರ್ಮರಣಕ್ಕೀಡಾಗಿದ್ದರು. ಆ ಬಸ್ಸಿಗೆ ಇನ್ಶೂರೆನ್ಸ್ ಕೂಡ ಇರಲಿಲ್ಲ. ಆದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತಪಟ್ಟ ಕುಟುಂಭಿಕರಿಗೆ ತಲಾ 2 ಲಕ್ಷ ರೂ.ನಂತೆ ಒಟ್ಟು 14 ಲಕ್ಷ ರೂ. ತೆಗೆಸಿಕೊಟ್ಟಿದ್ದೇನೆ. ಇದೇ ರೀತಿ ಆತ್ಮೀಕ ಮನೆಯವರಿಗೂ ಪರಿಹಾರ ಕಲ್ಪಿಸಿಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಪ್ರತಿಭಟನೆ ವಾಪಾಸ್:
ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಶಾಸಕರ ಕೈಯಲ್ಲೇ ಅಂಬೇಡ್ಕರ್ ಭವನ ಶಿಲಾನ್ಯಾಸ, ಉದ್ಘಾಟನೆ ಆಗಬೇಕೆಂಬುದೇ ನಮ್ಮ ಬಯಕೆ. ಈ ಹಿನ್ನೆಲೆಯಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸುವ ದೃಷ್ಟಿಯಲ್ಲಿ ಪ್ರತಿಭಟನೆ ನಡೆಸಿದ್ದೇವೆ ಎಂದರು. ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.