ಪುತ್ತೂರು: ಜನರ ಸೇವೆಯೇ ಜನಾರ್ದನನ ಸೇವೆ ಎಂಬ ವೇದವ್ಯಾಕ್ಯದೊಂದಿಗೆ ಗಾಂಧಿ ಕಂಡ ರಾಮ ರಾಜ್ಯ ನಿರ್ಮಾಣ ಮಾಡಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪುತ್ತೂರು ತಾಲೂಕು ಪಂಚಾಯಿತಿ, ಒಳಮೊಗ್ರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಗ್ರಾಮ ಪಂಚಾಯಿತಿ ಕಚೇರಿಯನ್ನು ಮಾ. 13ರಂದು ಉದ್ಘಾಟಿಸಿ ಮಾತನಾಡಿದರು.
ತಾನು ದೇವರ ಕೆಲಸ ಮಾಡಲು ಬಂದಿದ್ದೇನೆ ಎಂಬ ಭಾವನೆಯನ್ನಿಟ್ಟು ಕೆಲಸ ನಿರ್ವಹಿಸಿದ್ದೇನೆ. ಪ್ರತಿಯೊಬ್ಬ ಮತದಾರನ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಗೆ 11.40 ಕೋಟಿ ರೂ. ಅನುದಾನ ಬಂದಿದ್ದು, ಇದೀಗ ಒಳಮೊಗ್ರು ಗ್ರಾಮ ಪಂಚಾಯತಿಗೆ ಸುವ್ಯವಸ್ಥಿತ ಕಟ್ಟಡ ನಿರ್ಮಾಣವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಜತೆಗೆ ಸಿಬ್ಬಂದಿಗಳು ಹೇಗಿರಬೇಕು ಎಂಬುದನ್ನು ಒಳಮೊಗ್ರು ಗ್ರಾಪಂ ತೋರಿಸಿಕೊಟ್ಟಿದೆ ಎಂದರು.
ಸ್ವಚ್ಛತೆಯ ದೃಷ್ಟಿಯಲ್ಲಿ ಪುತ್ತೂರು ನಗರಸಭೆ 3ನೇ ಸ್ಥಾನಕ್ಕೆ ಬಂದಿದೆ. ಇದಕ್ಕೆ ಪೂರಕವಾಗಿ ಕಸವಿಲೇವಾರಿ ಘಟಕ, ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ಕೆದಂಬಾಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಆಗಿದೆ ಎಂದರು.
ಜನರಿಗೆ ನೇರ ಸ್ಪಂದನೆ: ಮಂಜುನಾಥ ಭಂಡಾರಿ
ವಿಧಾನಸಭಾ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನೇರವಾಗಿ ಜನರಿಗೆ ಸ್ಪಂದನೆ ಕೊಡುವುದು ಗ್ರಾಮ ಪಂಚಾಯಿತಿಗಳು. ಗ್ರಾಮ ಪಂಚಾಯಿತಿಗಳ ಕೆಲಸ ಕಾರ್ಯಗಳ ಹಿನ್ನಲೆಯಲ್ಲಿ ಹೇಗೆ ಬದಲಾವಣೆ ತರಬಹುದು, ಸ್ವಚ್ಛತೆ ಹೇಗೆ ಮಾಡಬಹುದು ಮುಂತಾದ ಪ್ರಮುಖ ವಿಷಯಗಳ ಕುರಿತು ಕಾರ್ಯಕ್ರಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದ ಅವರು, ಸುಂದರವಾದ ಪಂಚಾಯಿತಿ ಕಟ್ಟಡ ಇಂದು ಉದ್ಘಾಟನೆ ಆಗಿದೆ ಎಂದರು.
ಶಾಸಕರಿಂದ ಗ್ರಾಪಂ ಅಭಿವೃದ್ಧಿಗಾಗಿ 1200 ಕೋಟಿ ರೂ.: ಚನಿಲ ತಿಮ್ಮಪ್ಪ ಶೆಟ್ಟಿ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಪಂಚಾಯಿತಿಗಳ ಅಭಿವೃದ್ಧಿಗಾಗಿ 1200 ಕೋಟಿ ರೂ. ಅನುದಾನವನ್ನು ಶಾಸಕ ಸಂಜೀವ ಮಠಂದೂರು ಒದಗಿಸಿಕೊಟ್ಟಿದಾರೆ. ಶಾಲೆ, ಅಂಗನವಾಡಿಗಳ ಜೊತೆಗೆ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗಾಗಿಯೂ ಶಾಸಕರು ಶ್ರಮಿಸಿದ್ದಾರೆ. ಇದೀಗ ಒಳಮೊಗ್ರು ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡುವಲ್ಲಿಯೂ ಅನುದಾನ ಬಿಡುಗಡೆ ಮಾಡಿದ್ದು, ಕಟ್ಟಡ ಪ್ರಯೋಜನ ಸಾರ್ವಜನಿಕರಿಗೆ ಸಿಗುವಂತಾಗಲಿ ಎಂದು ಶುಭಹಾರೈಸಿದರು.
80 ವರ್ಷದ ಇತಿಹಾಸ: ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಸುಮಾರು 80 ವರ್ಷ ಇತಿಹಾಸ ಇರುವ ಒಳಮೊಗ್ರು ಗ್ರಾಮ ಪಂಚಾಯಿತಿಗೆ ಶಾಸಕ ಸಂಜೀವ ಮಠಂದೂರು ಅವರು 11.40 ಕೋಟಿ ರೂ. ಅನುದಾನ ಒದಗಿಸಿದ್ದು, ಅವರಿಗೆ ಧನ್ಯವಾದ ಸಲ್ಲಿಸಿದರು.
ಗ್ರಾಪಂ ಪಂಚಾಯಿತಿ ಉಪಾಧ್ಯಕ್ಷೆ ಹರಿಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನರಿಮೊಗರು ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿ, ಎಚ್.ಕೃಷ್ಣ ಮೂಲ್ಯ, ಶ್ರೀಧರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಒಳಮೊಗ್ರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವಿನಾಶ್ ಸ್ವಾಗತಿಸಿದರು. ಸದಸ್ಯ ಮಹೇಶ್ ಕೇರಿ ವಂದಿಸಿದರು.