ಮಾ. 16 ರಿಂದ ಕೆಪಿಟಿಸಿಎಲ್‌, ಎಸ್ಕಾಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ವೇತನ ಪರಿಷ್ಕರಣೆ ಹೆಚ್ಚಿಸುವಂತೆ ಆಗ್ರಹಿಸಿ ಕವಿಪ್ರನಿ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟ ನೀಡಿದ್ದ ಮುಷ್ಕರದ ನೋಟೀಸ್‌ ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ನಿಗದಿಯಂತೆ ಮಾರ್ಚ್‌ 16 ರಿಂದ ಸಾಮೂಹಿಕವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಕವಿಪ್ರನಿ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಆರ್‌. ಹೆಚ್. ಲಕ್ಷ್ಮೀಪತಿ ಹೇಳಿದ್ದಾರೆ.

ಇಂದು ನಗರದಲ್ಲಿ ಸಂಸ್ಥೆಗಳ ಒಕ್ಕೂಟದ ಸಭೆ ನಡೆಸಿದ ನಂತರ ಈ ವಿಷಯವನ್ನು ತಿಳಿಸಿದರು. ವೇತನ ಶ್ರೇಣಿಯನ್ನು ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಡಳಿತ ಮಂಡಳಿಗೆ 14 ದಿನಗಳ ಮುಷ್ಕರ ನೋಟೀಸ್‌ ಜಾರಿ ಮಾಡಲಾಗಿತ್ತು. ನೋಟೀಸ್‌ ಜಾರಿ ಮಾಡಿ ಹತ್ತುದಿನಗಳ ಕಳೆದರೂ ಇಲ್ಲಿಯವರೆಗೂ ನಮ್ಮ ಮಂಡಳಿಯಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಈಗಾಗಲೇ ನಿಗದಿಯಾಗಿರುವಂತೆ ಮಾರ್ಚ್‌ 16 ರಿಂದ ಸಾಮೂಹಿಕವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಸೋಮವಾರದಿಂದಲೇ ಈ ಬಗ್ಗೆ ನಮ್ಮ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಮುಷ್ಕರದ ರೂಪು ರೇಷೆಗಳನ್ನು ತಿಳಿಸಿಕೊಡಲಿದ್ದೇವೆ. ಸಾರ್ವಜನಿಕರಿಗೆ ಆಗುವ ತೊಂದರೆಗೆ ಸರಕಾರವೇ ಹೊಣೆ. ಕೆಲಸಕ್ಕೆ ಗೈರು ಹಾಜರಾಗುತ್ತೇವೆ ಆ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ಕೆಇಬಿ ಇಂಜಿನಿಯರುಗಳ ಸಂಘದ ಅಧ್ಯಕ್ಷರು ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಕೆ. ಶಿವಣ್ಣ, ಕೆಇಬಿ ಎಸ್‌.ಸಿ/ಎಸ್‌.ಟಿ ನೌಕರರ ಕಲ್ಯಾಣ ಸಂಸ್ಥೆ ಅಧ್ಯಕ್ಷರಾದ ಕೆ.ದಾಸ್‌ ಪ್ರಕಾಶ್‌, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾದ ಕೆ ರಾಮಚಂದ್ರ ರೆಡ್ಡಿ, ಕವಿಪ್ರನಿನಿ ಡಿಪ್ಲಮೊ ಇಂಜಿನಿಯರುಗಳ ಸಂಘದ ಅಧ್ಯಕ್ಷ ಜೆ. ಲೋಕೇಶ್‌ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ನೌಕರರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top