ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಗರ್ಭಗುಡಿಗೆ ಹೊದಿಸಿದ ಹಿತ್ತಾಳೆಯ ಹೊದಿಕೆ ಸಮರ್ಪಣಾ ಸಮಾರಂಭ ಮಾರ್ಚ್ 13ರಂದು ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡುತ್ತಾ, ಧಾರ್ಮಿಕ ಕೇಂದ್ರಗಳು ಸಮಾಜದ ಶ್ರದ್ಧಾ ಕೇಂದ್ರಗಳು. ಸಮಾಜದ ವಿಕಸನದಲ್ಲಿ ಇಂತಹ ಕೇಂದ್ರಗಳ ಪಾತ್ರ ಪ್ರಮುಖವಾದುದು. ಆದ್ದರಿಂದ ಭಕ್ತರು ಇಂತಹ ಕೇಂದ್ರಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುವುದು ಅಗತ್ಯ ಎಂದರು.
ಸಂಸ್ಕಾರ, ಸಂಸ್ಕೃತಿ ಬೆಳೆಯಬೇಕು: ಶಾಸಕ ಮಠಂದೂರು
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜಗತ್ತು ಉಳಿಯಬೇಕಾದರೆ ಭಾರತ ಉಳಿಯಬೇಕು; ಈ ದೇಶದ ಸಂಸ್ಕಾರ ಸಂಸ್ಕೃತಿಗಳು ಬೆಳೆಯಬೇಕು. ಈ ನಿಟ್ಟಿನಲ್ಲಿ 1978ರಿಂದಲೇ ಕಲ್ಲಾರೆಯಲ್ಲಿ ಶ್ರೀ ಗುರುರಾಘವೇಂದ್ರ ಮಠ ಸನಾತನ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ನಡೆಸುತ್ತಿದೆ. ಇಲ್ಲಿನ ಸೇವೆ ಸದಾ ಮುಂದುವರಿಯಲಿ ಎಂದು ಆಶಿಸಿದರು.
ಮಠದ ಟ್ರಸ್ಟಿಗಳಾದ ಸುಬ್ರಹ್ಮಣ್ಯ ಕೊಳತ್ತಾಯ, ಬೆಟ್ಟ ಈಶ್ವರ ಭಟ್, ಲೊಕೇಶ್ ಹೆಗ್ಡೆ, ಕಾರ್ಯದರ್ಶಿ ಯು. ಪೂವಪ್ಪ ಉಪಸ್ಥಿತರಿದ್ದರು.