ಎಸ್‌ವಿಬಿ ದಿವಾಳಿಯಾದ ಬಳಿಕ ಹಿಂಡೆನ್‌ಬರ್ಗ್ ಕಾರ್ಯಶೈಲಿ ಬಗ್ಗೆ ಅನುಮಾನ
ದೆಹಲಿ: ಸಾವಿರಾರು ಮೈಲು ದೂರದಲ್ಲಿ ಕುಳಿತು ಅದಾನಿ ಕಂಪನಿಗಳ ಕಡತಗಳನ್ನು ಪರಿಶೀಲಿಸಿ ಷೇಧರು ಮಾರುಕಟ್ಟೆಯಲ್ಲಿ ಗೋಲ್‌ಮಾಲ್ ಆಗಿದೆ ಎಂದು ವರದಿ ಬರೆದ ಅಮೆರಿಕದ ಹಿಂಡೆನ್‌ಬರ್ಗ್‌ನವರಿಗೆ ತಮ್ಮ ಕಾಲಬುಡದಲ್ಲೇ ಇರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಮುಳುಗುತ್ತಿರುವ ಕಾಣಲಿಲ್ಲವೇ?
ಅದಾನಿ ಕಂಪನಿಗಳ ಕುರಿತು ಶಂಕಾಸ್ಪದ ವರದಿ ನೀಡಿ ಭಾರತದ ಆರ್ಥಿಕತೆನ್ನು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸಿದ್ದ ಹಿಂಡೆನ್‌ಬರ್ಗ್ ಕುರಿತು ಹೀಗೊಂದು ಪ್ರಶ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎಸ್‌ವಿಬಿ ಬ್ಯಾಂಕ್‌ನ ಕುರಿತು ಯಾವುದೇ ಅಧ್ಯಯನವನ್ನು ಏಕೆ ಮಾಡಿಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.
ಲೋಕದ ಡೊಂಕು ತಿದ್ದುವ ಮೊದಲು… ಎಂದೆಲ್ಲ ಹಿಂಡೆನ್‌ಬರ್ಗ್ ರಿಸರ್ಚ್‌ನತ್ತ ಹಲವು ಜನರು ಬೊಟ್ಟು ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ತನ್ನ 21 ಶತಕೋಟಿ ಡಾಲರ್ ಹೂಡಿಕೆ ಮಾರಾಟದಿಂದ 1.8 ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಘೋಷಿಸಿದ ತಕ್ಷಣ ಅಲ್ಲಿನ ಬ್ಯಾಂಕ್ ನಿಯಂತ್ರಕ ಸಂಸ್ಥೆಯು ಬ್ಯಾಂಕಿಗೆ ಬೀಗ ಹಾಕಿತ್ತು. ಸತತ ಐದನೇ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯುತ್ತಮ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದ ಎಸ್‌ವಿಬಿ ದಿವಾಳಿಯಾಗಿತ್ತು.
ಅಮೆರಿಕದ ಪ್ರಮುಖ ಬ್ಯಾಂಕ್ ದಿವಾಳಿಯಾದ ಸುದ್ದಿಯಿಂದಾಗಿ ಅಮೆರಿಕದ ಹಿಂಡೆನ್‌ಬರ್ಗ್ ಕುರಿತೂ ಟೀಕೆಗಳು ಎದ್ದಿವೆ. ಭಾರತದ ಗೌತಮ್ ಅದಾನಿ ಅವರನ್ನು ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು. ಆದರೆ ಎಸ್‌ವಿಬಿ ಪ್ರಕರಣದಲ್ಲಿ ಏನು ತಪ್ಪಾಗಿದೆ ಎಂದು ಗುರುತಿಸಲು ಹಿಂಡನ್‌ಬರ್ಗ್ ವಿಫಲವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.
ಅಮೆರಿಕದ ಹಿಂಡೆನ್‌ಬರ್ಗ್ ಎಸ್‌ವಿಬಿ ಬ್ಯಾಂಕ್‌ನ ಕುರಿತು ಯಾವುದೇ ಅಧ್ಯಯನವನ್ನು ಏಕೆ ಮಾಡಿಲ್ಲ ಎಂದು ನಟ ವಿಂದು ದಾರಾ ಸಿಂಗ್ ಆಶ್ಚರ್ಯಪಟ್ಟಿದ್ದಾರೆ. ಅದಾನಿ ಗ್ರೂಪ್ ತನ್ನ ಎಲ್ಲಾ ಸಾಲಗಳನ್ನು (ಷೇರು ಮೇಲಾಧಾರದ ಮೇಲೆ) ಮರುಪಾವತಿ ಮಾಡಿದೆ. ಆದರೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿದಿದೆ. ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿಗೆ ಹಗರಣ ಎಂದು ಹಣೆಪಟ್ಟಿ ಹಚ್ಚಿದೆ. ಆದರೆ, ಎಸ್‌ವಿಬಿ ಬಗ್ಗೆ ಏನನ್ನೂ ಹೇಳಿಲ್ಲ. ಇದು ಹಿಂಡೆನ್‌ಬರ್ಗ್ ಸಂಶೋಧನೆ ಎಷ್ಟು ನಿಖರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಇನ್ನೊಬ್ಬರು ಸೋಷಿಯಲ್ ಮೀಡಿಯಾ ಬಳಕೆದಾರರು ದೂರಿದ್ದಾರೆ.
ಇವು ಉನ್ನತ ಆದೇಶದ ವಂಚನೆಗಳು. ಇವುಗಳು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತವೆ. ಭಾರತೀಯ ಕಂಪನಿಗಳು/ಆರ್ಥಿಕತೆಯನ್ನು ಹಾಳುಮಾಡಲು ಬಯಸುತ್ತವೆ. ಇವುಗಳಿಗೆ ತಮ್ಮ ಪಕ್ಕದಲ್ಲಿರುವ ಎಸ್‌ವಿಬಿ ಬ್ಯಾಂಕ್ ಬಗ್ಗೆ ತಿಳಿದಿರುವುದಿಲ್ಲ. ಸೊರೊಸ್/ಹಿಂಡೆನ್‌ಬರ್ಗ್ ಕಂಪನಿಗಳು ತಮ್ಮ ವರದಿಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತವೆ ಎಂದು ಇನ್ನೊಬ್ಬರು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
ಅಮೆರಿಕದ ಹದಿನಾಲ್ಕನೇ ದೊಡ್ಡ ಬ್ಯಾಂಆಕ್ ಆಗಿದ್ದ ಸಿಲಿಕಾನ್ ಬ್ಯಾಂಕ್‌ನ ಗ್ರಾಹಕರು ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಬ್ಯಾಂಕಿನ ಸೊತ್ತಿನ ಮೌಲ್ಯ ಕುಸಿದಿವೆ. ಷೇರು ದರ ಪಾತಾಳಕ್ಕೆ ಇಳಿದಿದೆ. ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ ಇದೀಗ ಈ ಬ್ಯಾಂಕ್‌ನ ನಿರ್ವಾಹಕ ಸಂಸ್ಥೆಯಾಗಿ ಬಿಕ್ಕಟ್ಟು ನಿಯಂತ್ರಿಸಲು ಯತ್ನಿಸುತ್ತಿದೆ.