ಪುತ್ತೂರು: ಪುಣಚ ಗ್ರಾಮದಲ್ಲಿರುವ ಕೃಷಿಕರು ಹಲವು ದಶಕಗಳಿಂದ ಅನುಭೋಗ ಮಾಡುತ್ತಿರುವ ಪಟ್ಟಾ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದು, ಈ ಸಮಸ್ಯೆಯನ್ನು ತಕ್ಷಣ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸರಿಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಈ ಭಾಗದ ಸುಮಾರು 7-8 ನಕುಟುಂಬಗಳು ತಮ್ಮ ವರ್ಗ ಜಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು 1968 ರಿಂದಲೇ ಅರಣ್ಯ ಇಲಾಖೆಯಿಂದ ತೊಂದರೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮಾ. 13 ರಂದು ಇಲ್ಲಿನ ಕೃಷಿಕರು ತಮ್ಮ ಜಮೀನಿನ ಅಭಿವೃದ್ಧಿಯ ದೃಷ್ಟಿಯಿಂದ ಜೆ.ಸಿ.ಬಿ ಯಂತ್ರದ ಮೂಲಕ ಕೆಲಸ ಆರಂಭಿಸಿದಾಗ ಅರಣ್ಯ ಇಲಾಖೆಯ ಫಾರೆಸ್ಟ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿಯನ್ನು ನಡೆಸದಂತೆ ತಡೆಯೊಡ್ಡಿತ್ತಾರೆ. ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿ ಮಾತುಕತೆ ನಡೆಸಿ ಒಂದು ತಿಂಗಳ ಕಾಲಾವಕಾಶವನ್ನು ನೀಡಬೇಕಾಗಿ ವಿನಂತಿಸಿಕೊಂಡ ಮೇರೆಗೆ ಹಾಗೂ ಒಂದು ತಿಂಗಳೊಳಗಾಗಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳವನ್ನು ಗುರುಸಿಕೊಳ್ಳುವುದಾಗಿ ಭರವಸೆಯನ್ನು ನೀಡಿದ ಕಾರಣ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಇಲ್ಲಿನ ಕೃಷಿಕರು ಹಲವು ದಶಕಗಳಿಂದ ಪಟ್ಟಾ ಚಾಗದಲ್ಲಿ ಕೃಷಿ ಮಾಡಿ ಬದುಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು 1967 ರಲ್ಲಿ ತಾವು ಗುಂಪೆ ಹಾಕಿದ್ದೇವೆ ಎಂದು ಹೇಳುತ್ತಾ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣದಿಂದ ಕಂದಾಯ ಇಲಾಖೆಯವರು, ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ಈ ಸಮಸ್ಯೆಗೆ ಪರಿಹಾರ ಕೊಡುವಂತೆ ನಾವು ಜಿಲ್ಲಾಧಿಕಾರಿಗೂ ವಿನಂತಿಸಿದ್ದೇವೆ. ತಿಂಗಳೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ರೈತ ಸಂಘ ಹೋರಾಟ ಮಾಡಲಿದೆ ಎಂದು ರೂಪೇಶ್ ರೈ ಎಚ್ಚರಿಕೆ ನೀಡಿದರು.
ರೈತ ಸಂಘ ಕೋಡಿಂಬಾಡಿ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಮಾತನಾಡಿ, ಕೆಲವು ಕಡೆಗಳ ಜಾಗಕ್ಕೆ ಸಂಬಂಧಿಸಿ ಅಕ್ರಮ -ಸಕ್ರಮ ಬೈಠಕ್ನಲ್ಲಿ ಜಾಗ ಮಂಜೂರಾತಿ ಆಗಿದ್ದರೂ ಆರ್.ಟಿ.ಸಿ. ನೀಡಿಲ್ಲ. ಈಗ ಕುಮ್ಕಿ ಜಾಗ ಎನ್ನುತ್ತಿದ್ದಾರೆ. ತಹಶೀಲ್ದಾರ್ ಗ್ರಾಮ ಭೇಟಿಯಲ್ಲಿ ಅರ್ಜಿಗಳ ವಿಲೇವಾಋಇ ಆಗುತ್ತಿಲ್ಲ. ಕನಿಷ್ಠ ಹಿಂಬರಹವನ್ನೂ ನೀಡುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಪ್ಲಾಟಿಂಗ್ ಸಮಸ್ಯೆ ದೊಡ್ಡ ಸಮಸ್ಯೆಯಾಘಿ ಪರಿಣಮಿಸಿದ್ದು, ಅದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚತ್ತಡ್ಕ, ಜಿಲ್ಲಾ ಕೋಶಾಧಿಕಾರಿ ಯತೀಶ್ ಗೌಡ ಮುಂಡೂರು ಉಪಸ್ಥಿತರಿದ್ದರು.