ಎಕ್ಸ್‌ಪ್ರೆಸ್‌ವೇ ಉದ್ಘಾಟನೆ
ಮಂಡ್ಯ : ಕರ್ನಾಟಕಕ್ಕೆ ಒಂದು ದಿನದ ಭೇಟಿ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಮೋದಿ ಆಗಮಿಸಿದ್ದಾರೆ. ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಆವರಣಕ್ಕೆ ತೆರಳಿದ್ದು, ಸಕ್ಕರೆ ನಾಡು ಮಂಡ್ಯ ಅಕ್ಕರೆಯ ಸ್ವಾಗತಕ್ಕೆ ಸಜ್ಜಾಗಿದೆ. ಶಿಕ್ಷಣ ಕಾಶಿ ಧಾರವಾಡದಲ್ಲೂ ಮೋದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಮೋದಿ ಸ್ವಾಗತಕ್ಕಾಗಿ ಅದ್ಭುತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರವಾಸಿಮಂದಿರ ವೃತ್ತದಿಂದ ಮೋದಿ ರೋಡ್‌ಶೋ ಆರಂಭವಾಗಿ ನಂದ ಸರ್ಕಲ್‌ವರೆಗೆ 1.8 ಕಿಲೋ ಮೀಟರ್ ರೋಡ್‌ಶೋ ನಡೆಸಲಿದ್ದು, ಮಂಡ್ಯದ ಪ್ರವಾಸಿಮಂದಿರ ಸರ್ಕಲ್ನಿಂದ ಮೋದಿ ರೋಡ್‌ಶೋ ಆರಂಭಿಸಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದ್ದು ರೋಡ್ ಶೋ ವೇಳೆ ಪ್ರಧಾನಿ ಮೋದಿ ಮೇಲೆ ಪುಷ್ಪಾರ್ಚನೆ ಮಾಡಲಾಗಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ. ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದಾರೆ. ದೂರದೂರುಗಳಿಂದ ಬೆಳಗ್ಗಿನಿಂದಲೇ ಜನರು ಬರಲಾರಂಭಿಸಿದ್ದು, ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಮೋದಿಯವರ ಕಾರಿನತ್ತ ಹೂವಿನ ಮಳೆಯನ್ನೇ ಹರಿಸುತ್ತಿದ್ದಾರೆ. ಖುಷಿಯಿಂದ ಮೋದಿಯವರು ಕೈಬೀಸುತ್ತಾ ತಮ್ಮ ಕಾರಿನ ಮೇಲೆ ಬಿದ್ದ ಹಳದಿ ಹೂವಿನ ದಳಗಳನ್ನು ಜನರತ್ತ ಎಸೆಯುತ್ತಿದ್ದಾರೆ.