ಪುತ್ತೂರು : ತಾಲೂಕು ಬಂಟರ ಸಂಘದ ಹಾಗೂ ಮಹಿಳಾ ಬಂಟರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಬಂಟ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಗರದ ಬಂಟರ ಭವನದಲ್ಲಿ ನಡೆಯಿತು.
ಪುತ್ತೂರು ಪದ್ಮಾ ಸೋಲಾರ್ ನ ಲತಾ ಪಿ. ಶೆಟ್ಟಿ ಮಹಿಳಾ ಬಂಟರ ಸಂಭ್ರಮವನ್ನು ಉದ್ಘಾಟಿಸಿ, ಬೆಳಕು ಹಾಗೂ ಹೆಣ್ಣಿಗೆ ಅವಿನಾಭಾವ ಸಂಬಂಧವಿದೆ. ಪ್ರಸ್ತುತ ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ, ತನ್ನಲ್ಲಿ ಫೋಷಕ ಶಕ್ತಿಯನ್ನು ಬೆಳೆಸಿಕೊಳ್ಳುವ ಜತೆಗೆ ಕ್ರಿಯಾಶೀಲರಾಗಿ ಪರಿಸರ, ಸಂಸಾರ, ಸಮಾಜವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ ಎಂದ ಅವರು, ಪ್ರಸ್ತುತ ಮಹಿಳೆ ಆಧುನಿಕತೆಯ ಸಂಸಾರಗಳನ್ನು ಬೆಳೆಸಿಕೊಳ್ಳದೆ ದುಡಿಮೆಯಲ್ಲಿ ತೋರಿಸಬೇಕಾದ ಅಗತ್ಯತೆ ಇದೆ. ಪರಿಶುದ್ಧ ಮನಸ್ಸನ್ನು ಹೊಂದಿರುವ ಮಹಿಳೆ ಇಂದು ತನ್ನನ್ನು ತಾನು ಕಾಪಾಡಿಕೊಳ್ಳುವುದನ್ನು ಕಲಿತುಕೊಂಡಿದ್ದಾಳೆ ಎಂದರು.
ಹೆಣ್ಣು ಶಕ್ತಿ ಪ್ರಪಂಚದಲ್ಲಿ ಇಲ್ಲದೆ ಕಲ್ಪನೆ ಅಸಾಧ್ಯ : ಮಲ್ಲಿಕಾ ಅಜಿತ್ ಶೆಟ್ಟಿ
ಆಕಾಶವಾಣಿ ಉದ್ಘೋಷಕಿ, ಉಪನ್ಯಾಸಕಿ ಮಲ್ಲಿಕಾ ಅಜಿತ್ ಶೆಟ್ಟಿ ಆಶಯ ಮಾತುಗಳನ್ನಾಡಿ, ಜೀವರಾಶಿಗಳಲ್ಲಿ ಮನುಷ್ಯನ ಸೃಷ್ಟಿ ವಿಶೇಷ. ಇದರಲ್ಲಿ ಗಂಡು-ಹೆಣ್ಣು ಸೃಷ್ಟಿಯಾಗಿದ್ದು, ಮಾತೃತ್ವಕ್ಕೆ ಪೂರಕವಾಗಿ ಹೆಣ್ಣು ಶಕ್ತಿ ಪ್ರಪಂಚದಲ್ಲಿ ಇಲ್ಲದೆ ಕಲ್ಪನೆ ಅಸಾಧ್ಯ.ಕ್ರಿಯಾಶೀಲತೆ, ಚಟುವಟಿಕೆಯಿಂದ ಸಂಸಾರ ನಡೆಸಿಕೊಂಡು ಹೋಗುವ ಹೆಣ್ಣಿಗೆ ಒಳಗಿನ ಮಾತೃತ್ವ ಶಕ್ತಿ ಎತ್ತರಕ್ಕ ಏರಿಸಿದೆ ಎಂದರು. ಆದರೆ ಸಮಾಜದಲ್ಲಿ ಮಹಿಳೆಯನ್ನು ಕೇವಲ ಮದುವೆಗಾಗಿ ತಯಾರು ಮಾಡದೆ ಶೈಕ್ಷಣಿಕವಾಗಿ ಅವಳ ಆಕಾಂಕ್ಷೆಗಳಿಗೆ ಒತ್ತು ನೀಡುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಮಾಲಿನಿ ಮುತ್ತುಶೆಟ್ಟಿ ಅವರು ಇಬ್ಬರು ಹೆಣ್ಣು ಮಕ್ಕಳಿಗೆ ಧನಸಹಾಯ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್, ಮಾಜಿ ಉಫಾಧ್ಯಕ್ಷೆ ರಮಾಕಾಂತಿ ಎ.ಕೆ.ರೈ ಭಾಗವಹಿಸಿದ್ದರು. ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕೋಶಾಧಿಕಾರಿ ವಾಣಿ ಎಸ್. ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದಾನ-ಧರ್ಮದಲ್ಲಿ ಬಂಟ ಸಮಾಜ ಮುಂದೆ : ಚಂದ್ರಹಾಸ ಡಿ. ಶೆಟ್ಟಿ
ಬಳಿಕ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಉದ್ಘಾಟಿಸಿ, ದೇಶ, ಸಮಾಜ ಮಹಿಳಾ ಪ್ರಧಾನವಾಗಿದ್ದು, ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮಹಿಳೆ. ಸಮಾಜಕ್ಕೆ ಮಹಿಳಾ ಶಾಸಕರನ್ನು ನೀಡಿದ್ದರೆ ಅದು ದ.ಕ. ಜಿಲ್ಲೆ ಎಂದ ಅವರು, ದಾನ-ಧರ್ಮದಲ್ಲೂ ಬಂಟ ಸಮಾಜ ಮುಂದಿದ್ದು, ದುರಾದೃಷ್ಟವಶಾತ್ ಅಂತರ್ ಜಾತಿ ವಿವಾಹ ಇನ್ನಿತರ ಕಾರಣಗಳಿಂದ ಬಂಟ ಸಮಾಜದ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಂಟ ಮಹಿಳೆಯರು ಸಮಾಜದವರನ್ನೇ ಮದುವೆಯಾಗುವ ಮೂಲಕ ಬಂಟ ಸಮಾಜವನ್ನು ಉಳಿಸುವಲ್ಲಿ ಪ್ರಯತ್ನಿಸಬೇಕು ಎಂಧರು.
ಬಂಟ ಸಮಾಜದ ಸಂಖ್ಯೆ ಕಡಿಮೆಯಾದರೂ ಸಾಧನೆ ದೊಡ್ಡದು : ಕಾವು ಹೇಮನಾಥ ಶೆಟ್ಟಿ
ಸಾಧಕರಿಗೆ ಸನ್ಮಾನ ನೆರವೇರಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಉಫಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಬಂಟ ಸಮಾಜದ ಸಂಖ್ಯೆ ಕಡಿಮೆ, ಸಾಧನೆ ದೊಡ್ಡದು. ಬಂಟ ಸಮಾಜದವರಿಗೆ ನಾಯಕತ್ವ ಗುಣ ಸ್ವಾಭಾವಿಕವಾಗಿ ಬಂದಿರುವುದರಿಂದ ಉದ್ಯಮ, ಸಾಮಾಜಿಕ, ರಾಜಕೀಯವಾಗಿ ಸಾಧನೆ ಮಾಡಿದ ಗುಣ ಸಲ್ಲುವುದು ಬಂಟ ಸಮಾಜಕ್ಕೆ. ಈ ನಿಟ್ಟಿನಲ್ಲಿ ಇಂದಿನ ಸನ್ಮಾನ ಮುಂದಿನ ಪೀಳಿಗೆಗೆ ಮಾದರಿ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರುಷ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ :
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಮಹಿಳೆಯರಾದ ರಾಜ್ಯ ಪುರಸ್ಕೃತ ಕ್ರೀಡಾಪಟು ಡಾ.ಆಶಾ ಶಂಕರ್ ಭಂಡಾರಿ ಡಿಂಬ್ರಿ, ಬಿ.ವೆಲ್ ಫಾರ್ಮ್ ನ ಸಿಇಒ ಡಾ.ಅನಿಲ ದೀಪಕ್ ಶೆಟ್ಟಿ ಬನ್ನೂರು, ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ರಾಧಾ ಬಿ.ರೈ ಹಾಗೂ ಪುರುಷರಾದ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಹಕಾರ ರತ್ನ ಪುರಸ್ಕೃತ ದಂಬೆಕಾನ ಸದಾಶಿವ ರೈ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಸಮನೆ ಗಂಗಾಧರ ಶೆಟ್ಟಿ ಅವರನ್ನು ಹಾರ, ಪೇಟ ತೊಡಿಸಿ ಸ್ಮರಣಿಕೆ, ಫಲಫುಷ್ಪ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ರೈ ಮಿತ್ರಂಪಾಡಿ ಅವರನ್ನು ಅವರ ಅನುಪಸ್ಥಿತಿಯಲ್ಲಿ ಮನೆಯವರನ್ನು ಸನ್ಮಾನಿಸಲಾಯಿತು.
ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.