ಇಡಿ ದಾಳಿಯಲ್ಲಿ ಸಿಕ್ಕಿದೆ ಅಪಾರ ಸೊತ್ತುಗಳ ದಾಖಲೆ
ಹೊಸದಿಲ್ಲಿ : ಉದ್ಯೋಗಕ್ಕಾಗಿ ಭೂ ಹಗರಣ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಲೆಕ್ಕವಿಲ್ಲದ 600 ಕೋಟಿ ರೂ. ಆದಾಯ ಪತ್ತೆ ಮಾಡಲಾಗಿದೆ. ಲಾಲೂ ಪ್ರಸಾದ್ ಕುಟುಂಬ ಮತ್ತು ಅವರ ಸಹಚರರ ಪರವಾಗಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಹೆಚ್ಚಿನ ಹೂಡಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ತಿಳಿಸಿದೆ.
1 ಕೋಟಿ ರೂ. ನಗದು ಮತ್ತು 1900 ಅಮೆರಿಕನ್ ಡಾಲರ್ ವಿದೇಶಿ ಕರೆನ್ಸಿ, 1.5 ಕೆಜಿಗೂ ಹೆಚ್ಚಿನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 24 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಅವರ ಹಲವು ಕುಟುಂಬ ಸದಸ್ಯರಿಗೆ ಸೇರಿದ ಅನೇಕ ಸ್ಥಳಗಳಲ್ಲಿ ಇಡಿ ಶುಕ್ರವಾರ ದಾಳಿ ನಡೆಸಿತ್ತು.
ಲಾಲೂ ಪ್ರಸಾದ್ ಯಾದವ್ ಕುಟುಂಬದ ಸದಸ್ಯರು ಮತ್ತು ಬೇನಾಮಿದಾರರ ಹೆಸರಿನಲ್ಲಿ ಹೊಂದಿರುವ ವಿವಿಧ ಆಸ್ತಿ ದಾಖಲೆಗಳು, ಮಾರಾಟ ಪತ್ರಗಳು ಸೇರಿದಂತೆ ಹಲವಾರು ದಾಖಲೆಗಳು ಅಕ್ರಮ ವಹಿವಾಟು ತೋರಿಸಿವೆ. ದಾಳಿ ವೇಳೆ 600 ಕೋಟಿ ಮೌಲ್ಯದ ಅಕ್ರಮ ವಹಿವಾಟು ಪತ್ತೆ ಹಚ್ಚಲಾಗಿದೆ. ಇದರಲ್ಲಿ 350 ಕೋಟಿ ರೂ. ಸ್ಥಿರಾಸ್ತಿ ರೂಪದಲ್ಲಿದ್ದರೆ, ಬೇನಾಮಿಯಾಗಿ 250 ಕೋಟಿ ರೂ. ವ್ಯವಹಾರವಾಗಿದೆ ಎಂದು ಇಡಿ ಹೇಳಿದೆ.
ತೇಜಸ್ವಿ ಯಾದವ್ ದಕ್ಷಿಣ ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ಡಿ-1088ನಲ್ಲಿರುವ ನಾಲ್ಕು ಅಂತಸ್ತಿನ ಬಂಗಲೆ ಎಬಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಪ್ರಕರಣದಲ್ಲಿ ಈ ಕಂಪನಿ ಕೂಡಾ ಫಲಾನುಭವಿ ಸಂಸ್ಥೆ ಎಂದು ಹೆಸರಿಸಲಾಗಿದೆ. ಕಂಪನಿ, ತೇಜಸ್ವಿ ಯಾದವ್ ಮತ್ತು ಅವರ ಕುಟುಂಬದ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿದ್ದು, ಬಂಗಲೆಯ ಪ್ರಸ್ತುತ ಮಾರುಕಟ್ಟೆ ಬೆಲೆ ರೂ. 150 ಕೋಟಿಯಷ್ಟಾಗಿದೆ ಎಂದು ಇಡಿ ಮಾಹಿತಿ ನೀಡಿದೆ.
ಈ ಆಸ್ತಿ ಖರೀದಿಸುವಲ್ಲಿ ಅಪಾರ ಪ್ರಮಾಣದ ಹಣ, ಅಕ್ರಮ ವಹಿವಾಟು ನಡೆದಿರುವ ಸಾಧ್ಯತೆಯಿದ್ದು, ಇದರಲ್ಲಿ ಕೆಲವು ಮುಂಬೈ ಮೂಲದ ಉದ್ಯಮಿಗಳು, ಚಿನ್ನಾಭರಣ ಕ್ಷೇತ್ರದ ಮಾಲೀಕರನ್ನು ಈ ಬಳಸಿಕೊಳ್ಳಲಾಗಿದೆ. ಈ ಆಸ್ತಿಯನ್ನು ದಾಖಲೆಯಲ್ಲಿ ಎಬಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಕಚೇರಿ ಎಂದು ಘೋಷಿಸಲಾಗಿದ್ದರೂ, ತೇಜಸ್ವಿ ಪ್ರಸಾದ್ ಯಾದವ್ ಇದನ್ನು ಪ್ರತ್ಯೇಕವಾಗಿ ವಸತಿ ಆವರಣವಾಗಿ ಬಳಸುತ್ತಿದ್ದಾರೆ. ಶೋಧದ ವೇಳೆ ತೇಜಸ್ವಿ ಪ್ರಸಾದ್ ಯಾದವ್ ವಾಸದ ಮನೆಯಾಗಿ ಬಳಸುತ್ತಿರುವುದು ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ.
ಬಡ ಗ್ರೂಪ್-ಡಿ ಅರ್ಜಿದಾರರಿಂದ ಕೇವಲ 7.5 ಲಕ್ಷ ರೂ.ಗೆ ಲಾಲು ಪ್ರಸಾದ್ ಅವರ ಕುಟುಂಬ ಸ್ವಾಧೀನಪಡಿಸಿಕೊಂಡಿರುವ ನಾಲ್ಕು ಜಮೀನುಗಳನ್ನು ರಾಬ್ರಿ ದೇವಿ ಅವರು ಆರ್‌ಜೆಡಿ ಮಾಜಿ ಶಾಸಕ ಸೈಯದ್ ಅಬು ದೋಜಾನಾ ಅವರಿಗೆ ಮಾರಾಟ ಮಾಡಿ 3.5 ಕೋಟಿ ರೂಪಾಯಿ ಗಳಿಸಿದ್ದಾರೆ. ಹೀಗೆ ಪಡೆದ ಮೊತ್ತದ ಹೆಚ್ಚಿನ ಭಾಗವನ್ನು ತೇಜಸ್ವಿ ಪ್ರಸಾದ್ ಯಾದವ್ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದೇ ಮಾದರಿಯಲ್ಲಿ ರೈಲ್ವೇಯಲ್ಲಿ ಗ್ರೂಪ್ ಡಿ ಉದ್ಯೋಗಕ್ಕಾಗಿ ಹಲವಾರು ಬಡ ಪೋಷಕರು ಮತ್ತು ಅಭ್ಯರ್ಥಿಗಳಿಂದ ಭೂಮಿಯನ್ನು ತೆಗೆದುಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.