80 ವರ್ಷ ಮೇಲ್ಪಟ್ಟವರಿಗೆ, ವಿಕಲ ಚೇತನರಿಗೆ ಮನೆಯಿಂದಲೇ ಮತದಾನ ಸೌಲಭ್ಯ

ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಜಾರಿ

ಬೆಂಗಳೂರು : ವಯೋವೃದ್ಧರು ಮತ್ತು ವಿಕಲ ಚೇತನರನ್ನು ಈ ಸಲ ಮತಗಟ್ಟೆಗೆ ಎತ್ತಿಕೊಂಡು ಅಥವಾ ಹೊತ್ತುಕೊಂಡು ತರುವ ಅಗತ್ಯ ಇಲ್ಲ. 80 ವರ್ಷಕ್ಕೂ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನ ಮತದಾರರು ಬಯಸಿದರೆ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿದ್ದೇವೆ. ಅಧಿಸೂಚನೆ ಹೊರಡಿಸಿದ 5 ದಿನಗಳೊಳಗೆ ಫಾರ್ಮ್ 12ಡಿ ಲಭ್ಯವಿರುತ್ತದೆ. ಇದರಿಂದ 80 ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು.

80 ವರ್ಷ ಮೇಲ್ಪಟ್ಟವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಚುನಾವಣಾ ಆಯೋಗ ಪ್ರೋತ್ಸಾಹಿಸುತ್ತಿದ್ದರೂ, ಬರಲು ಸಾಧ್ಯವಾಗದವರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಅವರು ಹೇಳಿದರು. ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ಕುಮಾರ್ ವಿವರಿಸಿದರು. “ಮನೆಯಿಂದ ಮತದಾನದ ಸೌಲಭ್ಯ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.
ವಿಶೇಷ ಚೇತನರಿಗಾಗಿ ‘ಸಕ್ಷಮ್’ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಇದರಲ್ಲಿ ಲಾಗಿನ್ ಆಗಿ ಮತದಾನದ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮತ್ತೊಂದು ‘ಸುವಿಧಾ’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮತ್ತು ಅಫಿಡವಿಟ್‌ಗೆ ಇದು ಆನ್‌ಲೈನ್ ಪೋರ್ಟಲ್ ಆಗಿದೆ. ಅಭ್ಯರ್ಥಿಗಳು ಸಭೆ, ರ್‍ಯಾಲಿಗಳಿಗೆ ಅನುಮತಿ ಪಡೆಯಲು ‘ಸುವಿಧಾ’ ಪೋರ್ಟಲ್ ಬಳಸಬಹುದಾಗಿದೆ. ಮತದಾರರ ಅನುಕೂಲಕ್ಕಾಗಿ ನೋ ಯುವರ್ ಕ್ಯಾಂಡಿಡೇಟ್ (ಕೆವೈಸಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.































 
 

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ ಎಂಬುದನ್ನು ರಾಜಕೀಯ ಪಕ್ಷಗಳು ತಮ್ಮ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತದಾರರಿಗೆ ತಿಳಿಸಬೇಕು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರು ಸಲ್ಲಿಸಲು ಆಯೋಗವು ಇ-ವಿಜಿಲ್ ಆ್ಯಪ್ ಪರಿಚಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಲು 100 ನಿಮಿಷ ಬೇಕಾಗುತ್ತದೆ ಎಂದರು “ಇದು ಉಲ್ಲಂಘನೆ ರೆಕಾರ್ಡ್ ಮಾಡಲು, ವರದಿ ಮಾಡಲು ಮತ್ತು ಪರಿಹರಿಸಲು ಒಂದೇ ಆ್ಯಪ್ ಆಗಿದ್ದು, 100 ನಿಮಿಷಗಳಲ್ಲಿ ಕುಂದುಕೊರತೆ ಪರಿಹರಿಸುತ್ತದೆ ಎಂದು ಅವರು ತಿಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top