ದಂಬೆತ್ತಿಮಾರು ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದ ವಾರ್ಷಿಕ ನೇಮೋತ್ಸವ, ಧಾರ್ಮಿಕ ಸಭೆ

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರು ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದಲ್ಲಿ ಮಾ.10, 11ರಂದು ನಡೆದ  ವಾರ್ಷಿಕ ನೇಮೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ  ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಮೂಲನಂಬಿಕೆಯ ತಳಹದಿಯಲ್ಲಿ ಬೆಳೆದು ಬಂದ ಕ್ಷೇತ್ರವಿದು. ಸ್ವಾರ್ಥರಹಿತ ಭಕ್ತಿ,  ನಿಸ್ವಾರ್ಥ ಸೇವೆಯಿಂದ ಸಾನಿಧ್ಯ ವೃದ್ಧಿಯಾಗಲು ಸಾಧ್ಯ ಎಂದ ಅವರು, ಬಹಳ ವೇಗದ ಜಗತ್ತಿನಲ್ಲಿ ನಾವಿದ್ದು, ಇಂತಹ ವೇಳೆಯಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ತಂದೆ-ತಾಯಿಯನ್ನೇ ಮರೆತುಬಿಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಮೆರಿಕದಲ್ಲಿ ನಮ್ಮ ಸಂಸ್ಕೃತಿಯನ್ನು ಒಪ್ಪಿಕೊಂಡು, ಹರೇ ರಾಮ ಹರೇ ಕೃಷ್ಣ ಜಪಿಸುತ್ತಾರೆ. ಈ ಸಂಸ್ಕೃತಿ ನಮ್ಮಲ್ಲಿಲ್ಲ. ನೆಮ್ಮದಿ ಆರೋಗ್ಯದ ಬದುಕು ಸಿಗಲು ವಾರಕ್ಕೊಮ್ಮೆಯಾದರೂ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಹೋಗಬೇಕು ಎಂದರು.

ಹುಟ್ಟಿನ ಆಧಾರವೇ ಬದುಕಿನ ಮಾನದಂಡವಲ್ಲ. ಈ ದೇಶದ ಮೂಲ ನಂಬಿಕೆ ನೂರಕ್ಕೆ ನೂರು ಸತ್ಯ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದನ್ನು ತೆಗೆದು ಹಾಕಲು ಜಗತ್ತಿನ ಯಾವ ವಿಜ್ಞಾನಿಯಿಂದಲೂ ಅಸಾಧ್ಯ. ಪ್ರಕೃತಿಯ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ನೆಲ ನಮ್ಮದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಮುಂದಿನ ತಲೆಮಾರಿಗೆ ಈ ಸಂಸ್ಕೃತಿ ಸಾಗಬೇಕು. ಅದಕ್ಕೆ ದಂಬೆತ್ತಿಮಾರು ಪೂರಕವಾಗಿ ಬೆಳಗುತ್ತಿದೆ ಎಂದರು.































 
 

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ಮಾತನಾಡಿ, ದಂಬೆತ್ತಿಮಾರು ಕ್ಷೇತ್ರವನ್ನು ನೋಡುವಾಗ ಹಿಂದಿನ ವರ್ಷದಿಂದ ಈ ವರ್ಷಕ್ಕೆ ಬಹಳಷ್ಟು ಬದಲಾವಣೆಯಾಗಿದೆ. ಅಂದರೆ ಬೆಳವಣಿಗೆ ಸಂಕೇತ ಮತ್ತು ಕೊರಗಜ್ಜನ ಕಾರಣೀಕತೆ ಇಲ್ಲಿ ಕಾಣಿಸುತ್ತದೆ. ಭಕ್ತರ ಭಕ್ತಿ, ಶ್ರದ್ಧೆ ಇನ್ನಷ್ಟು ಕ್ಷೇತ್ರವನ್ನು ಬೆಳಗಿಸಲಿ ಎಂದ ಅವರು,  ಧಾರ್ಮಿಕ ಶ್ರದ್ಧೆಯ ಕೇಂದ್ರ ಆರ್ಯಾಪು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ಮುಂದಡಿ ಇಟ್ಟಿದ್ದೇವೆ. ಅದಕ್ಕಾಗಿ ದಿನವನ್ನು ನಿಗದಿ ಮಾಡಿದ್ದೇವೆ. ಭಕ್ತರ ಸೇವೆ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ದೇವರ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ್ ಅಮೀನ್ ಹೊಸಮನೆ ಮಾತನಾಡಿ, ದಂಬೆತ್ತಿಮಾರು ಹಿರಿಯರ ಕಾಲದಿಂದಲು ಬಹು ಪ್ರಾಮುಖ್ಯತೆ ಪಡೆದ ಸ್ಥಳ. ಇದಕ್ಕೆ ಕಂಬಳ ಗದ್ದೆ ಎಂದು ಕರೆಯುವ ಪ್ರತೀತಿಯೂ ಇದೆ ಎಂದರು.

ಜಯಂತ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ದೇವರ ಅನುಗ್ರಹ ಸಿಗಲು ಯೋಗ ಬೇಕು. ಇಂತಹ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಮೂಲಕ, ಆ ಯೋಗವನ್ನು ನಾವು ಪಡೆದುಕೊಂಡಂತಾಗಿದೆ. ದಂಬೆತ್ತಿಮಾರು ಕ್ಷೇತ್ರ ವರ್ಷದಿಂದ ವರ್ಷಕ್ಕೆ ಬೆಳಗುತ್ತಿದೆ. ಇಲ್ಲಿ ಎಲ್ಲರ ಚಿಂತನೆ ಒಂದೇ ಆಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಾಮೋದರ ಎಂ. ಮಾಲಡ್ಕ, ಈ ಕ್ಷೇತ್ರ ಕಷ್ಟ ಎಂದು ಬಂದವರ ಕೈ ಬಿಡಲಿಲ್ಲ. ಭಕ್ತರ ಸಂಕಷ್ಟ ಪರಿಹಾರವಾಗಿದೆ. ಇಲ್ಲಿಯ ನಂದಾದೀಪ ಸದಾ ಉರಿಯುತ್ತಿರಬೇಕು ಎಂದರು.

ಈ ಸಂದರ್ಭದಲ್ಲಿ ದೂಪದಾರತಿ ತುಳು ಆಲ್ಬಂ ಸಾಂಗ್ ಅನ್ನು ಬಿಡುಗಡೆಗೊಳಿಸಲಾಯಿತು. ಐತ್ತ ಗೋಳಿಪದವು, ಪರಮೇಶ್ವರ ಮಡಿವಾಳ, ಸೇಸಪ್ಪ ನಾಯ್ಕ ಮೇಗಿನ ಪಂಜ, ಖುಷಿ ವಿಟ್ಲ, ಪ್ರವೀಣ್ ಕಕ್ಕೆಬೆಟ್ಟು, ಪ್ರಶಾಂತ್ ಪುತ್ತೂರು, ಕಿರುಚಿತ್ರ ನಿರ್ದೇಶಕ, ನಟ ಪ್ರವೀಣ್ ಆಚಾರ್ಯ ಒಳತ್ತಡ್ಕ, ಮಾಧವ ಎಂ. ಮಾಲಡ್ಕ ಬೆಟ್ಟಂಪಾಡಿ, ಡಿಂಪಲ್ ಶೆಟ್ಟಿ ಮೇರ್ಲ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸ್ವಯಂಸೇವಕರನ್ನು ಗೌರವಿಸಲಾಯಿತು. ಕೃಷ್ಣಪ್ಪ ಗೌಡ ಅಡ್ಕ ಸ್ವಾಗತಿಸಿ, ತಾರಾನಾಥ್ ಬಂಗೇರ ಮೇರ್ಲ ವಂದಿಸಿದರು. ಸಂತೋಷ್ ಸುವರ್ಣ ಮೇರ್ಲ ಕಾರ್ಯಕ್ರಮ ನಿರೂಪಿಸಿದರು.

ನೇಮೋತ್ಸವ, ಧಾರ್ಮಿಕ ಕಾರ್ಯಕ್ರಮ:

ಮಾರ್ಚ್ 9ರಂದು ಸಂಜೆ ದಂಬೆತ್ತಿಮಾರು ಕ್ಷೇತ್ರಕ್ಕೆ ಹರಕೆಯ ಬೆಳ್ಳಿಯ ಗೋಂಪರನ್ನು ಭವ್ಯ ಶೋಭಾಯಾತ್ರೆಯ ಮೂಲಕ ತರಲಾಯಿತು. ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಶ್ರೀ ಕೊರಗತನಿಯ ಕ್ಷೇತ್ರದಲ್ಲಿ ಮಾ. 10ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ ಭಜನೆ ನಡೆದು, ಸಂಜೆ ದೈವಗಳ ಭಂಡಾರ ಇಳಿಸಲಾಯಿತು. ನಂತರ ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಚೌಕಾರು ಮಂತ್ರವಾದಿ ಗುಳಿಗ ಹಾಗೂ ಕಲ್ಲುರ್ಟಿ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಾರ್ಚ್ 11ರಂದು ಬೆಳಿಗ್ಗೆ ಕೊರಗ ತನಿಯ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top