ಪುತ್ತೂರು: ಯುವಶಕ್ತಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಯುವಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿದ ರಾಷ್ಟ್ರ ಭಾರತ. ಯುವ ಸಂಪನ್ಮೂಲ ಸದ್ಬಳಕೆಯಾದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿಯತ್ತ ಸಾಗುವುದು ನಿಶ್ಚಿತ ಎಂದು ಬೆಳ್ಳಾರೆಯ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಹೇಳಿದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ಮುಂಡೂರು ಶಾಲೆಯಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಭಾರತ ಗ್ರಾಮಗಳ ದೇಶ. ಗ್ರಾಮಗಳು ಅಭಿವೃದ್ಧಿಯಾದಲ್ಲಿ ದೇಶವು ಮತ್ತಷ್ಟು ಪ್ರಗತಿಯನ್ನು ಸಾಧಿಸುತ್ತದೆ. ಸಶಕ್ತ ಯುವಶಕ್ತಿ ನಿರ್ಮಾಣದಲ್ಲಿ ಎನ್‌ಎಸ್‌ಎಸ್ ಪಾತ್ರ ಅಪೂರ್ವವಾದದ್ದು. ಇಂತಹ ಶಿಬಿರಗಳು ಜನರ ವೈಯುಕ್ತಿಕ ಜೀವನದಲ್ಲಿ ಅಪಾರವಾದ ಬದಲಾವಣೆಗಳನ್ನು ತಂದುಕೊಂಡು ಅವರನ್ನು ಉತ್ತುಂಗಕ್ಕೆ ಏರಿಸಲು ಸಹಕಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಾಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತಿ ಶಿವಪ್ಪ ಪೂಜಾರಿ ವಹಿಸಿ, ಮಕ್ಕಳ ಮನಃಪರಿವರ್ತನೆಗೆ ಹೇರಳವಾದ ಅವಕಾಶವನ್ನು ಎನ್‌ಎಸ್‌ಎಸ್ ಕಲ್ಪಿಸಿಕೊಡುತ್ತದೆ. ಒಬ್ಬ ವಿದ್ಯಾರ್ಥಿ ವಿದ್ಯಾವಂತನಾದಲ್ಲಿ ಆ ವಿದ್ಯೆಯು ಅವರ ಜೀವನವನ್ನು ರೂಪಿಸುತ್ತದೆ. ಹಲವಾರು ಮನೆಯಲ್ಲಿ ಕಲಿಯದ ಜೀವನ ಪಾಠಗಳನ್ನು ಇಲ್ಲಿ ಕಲಿಯಬಹುದು. ಇದು ಅವನ ಭವಿಷ್ಯದ ಜೀವನವನ್ನು ಸುಖಮಯವಾಗಿಸುತ್ತದೆ ಎಂದರು.
ಶಿಬಿರಾರ್ಥಿಯಾದ ಧನ್ಯಶ್ರೀ ಶಿಬಿರದ ಧ್ಯೇಯ ವಾಕ್ಯವಾಗಿರುವ ಸಾಮಾಜಿಕ ಜಾಲತಾಣದ ಸದ್ಬಳಕೆಯತ್ತ ನಮ್ಮ ಚಿತ್ತ ಎಂಬ ವಿಷಯದ ಬಗ್ಗೆ ವಿವರಣೆ ನೀಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ತಿಮ್ಮಕ್ಕ, ಶರ್ಮಿಳಾ ಹಾಗೂ ಕುಸುಮ ಟಿ. ಶೆಟ್ಟಿ ನುಳಿಯಾಲು, ನಿಡ್ಪಳ್ಳಿ ಜೈಭೀಮ್ ಟ್ರಸ್ಟ್ ಅಧ್ಯಕ್ಷ ಮಹೇಶ್, ಶಿಬಿರಾಧಿಕಾರಿ ಪ್ರೊ. ಹರಿಪ್ರಸಾದ್ ಎಸ್. ಮತ್ತು ಸಹ ಶಿಬಿರಾಧಿಕಾರಿಯಾದ ರಾಮ ಉಪಸ್ಥಿತರಿದ್ದರು. ಶಿಬಿರಾರ್ಥಿ ನಿತ್ಯಾನಂದ ಬಿ. ಸ್ವಾಗತಿಸಿ, ಜೀವನ್ ರಾಜ್ ವಂದಿಸಿದರು. ಪಲ್ಲವಿ ಬಿ. ರೈ ಕಾರ್ಯಕ್ರಮ ನಿರ್ವಹಿಸಿದರು.