ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ಗೆ ಬೀಗ : ಅಮೆರಿಕದ ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ

ವಾಷಿಂಗ್ಟನ್ :‌ ಅಮೆರಿಕದ ಜನಪ್ರಿಯ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್‌ ಆಗಿದೆ. ಇದರಿಂದ ಲಕ್ಷಾಂತರ ಹೂಡಿಕೆದಾರರು ಆತಂಕದಲ್ಲಿದ್ದು, ಜಾಗತಿಕ ಮಾರುಕಟ್ಟೆಗಳು ಕೂಡ ತೀವ್ರ ಕುಸಿತ ಕಂಡಿವೆ. ಬ್ಯಾಂಕ್‌ ಷೇರುಗಳು ನೆಲಕಚ್ಚಿದ್ದು, ಅಮೆರಿಕದ ಬ್ಯಾಂಕಿಂಗ್‌ ವಲಯ ಅಕ್ಷರಶ: ತತ್ತರಿಸಿದೆ. ಕೆಲವು ಬೃಹತ್‌ ಟೆಕ್‌ ಕಂಪನಿಗಳಿಗೆ ಸಾಲ ನೀಡುವ ಮೂಲಕ ಭಾರಿ ಹೆಸರುವಾಸಿಯಾಗಿತ್ತು ಈ ಬ್ಯಾಂಕ್‌.
ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ್ನು ಮುಚ್ಚಿದ್ದಾರೆ. 2008ರಲ್ಲಿ ಎದುರಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಅಮೆರಿಕ ಎದುರಿಸಿದ ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ)ಮುಚ್ಚಿರುವ ನಿಯಂತ್ರಕರು, ಅದರ ಠೇವಣಿಗಳ ನಿಯಂತ್ರಣವನ್ನು ಸಂಪೂರ್ಣವಾಗಿ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಆತಂಕಿತರಾದ ಗ್ರಾಹಕರು ಠೇವಣಿ ಹಣಕ್ಕಾಗಿ ಮುಗಿಬಿದ್ದ ಹಿನ್ನೆಲೆಯಲ್ಲಿ, ಬ್ಯಾಂಕ್ ಷೇರಿನ ಬೆಲೆಯು ಕಳೆದ ಎರಡು ದಿನಗಳಲ್ಲಿ ಐತಿಹಾಸಿಕ ಕುಸಿತ ಕಂಡಿದೆ. ಕೇವಲ 48 ಗಂಟೆಗಳ ಒಳಗೆ ಇಷ್ಟೆಲ್ಲಾ ಬೆಳವಣಿಗೆ ನಡೆದಿರುವುದು ಅಮೆರಿಕದ ಬ್ಯಾಂಕಿಂಗ್‌ ವಲಯ ಆತಂಕದ ಕ್ಷಣಗಳನ್ನು ಎದುರಿಸುತ್ತಿದೆ.

ಟೆಕ್ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತದ ಸಂಪತ್ತನ್ನು ಗಳಿಸಿದ ನಂತರ, ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಹೆಚ್ಚಿನ ಆಸ್ತಿಗಳನ್ನು ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿತ್ತು. ಹಣದುಬ್ಬರ ದರಗಳನ್ನು ತಗ್ಗಿಸಲು ಕಳೆದ ವರ್ಷ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿದ್ದರಿಂದ, ಬಾಂಡ್ ಮೌಲ್ಯಗಳು ಕಡಿಮೆಯಾಗಿ ಬ್ಯಾಂಕ್‌ ಭಾರಿ ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ.
ಕೋವಿಡ್ ನಂತರ ಸ್ಟಾರ್ಟ್‌ಅಪ್ ಫಂಡಿಂಗ್ ಕೂಡ ಕಡಿಮೆಯಾಗಲು ಪ್ರಾರಂಭಿಸಿದ್ದರಿಂದ, ಹೆಚ್ಚಿನ ಸಂಖ್ಯೆಯ ಬ್ಯಾಂಕ್‌ನ ಗ್ರಾಹಕರು ಹಣವನ್ನು ಹಿಂತೆಗೆದುಕೊಳ್ಳಲು ಮುಂದಾದರು. ಇದರ ಪರಿಣಾಮಾಗಿ ಬ್ಯಾಂಕ್‌ನ ಆಸ್ತಿಗಳ ಮೌಲ್ಯ ಕುಸಿತ ಕಂಡಿದ್ದು, ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಕೆಲವು ಹೂಡಿಕೆಗಳನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿತು. ಈ ವಾರದ ಆರಂಭದಲ್ಲಿ ಬ್ಯಾಂಕ್‌ ಸುಮಾರು 2 ಬಿಲಿಯನ್‌‌ ಅಮೆರಿಕನ್ ಡಾಲರ್‌ ನಷ್ಟವಾಗಿದೆ ಎಂದು ಹೇಳಿತ್ತು. ಇದೀಗ ಬ್ಯಾಂಕ್‌‌ ಸಂಪೂರ್ಣವಾಗಿ ಮುಚ್ಚಿರುವುದರಿಂದ, ಸುಮಾರು 175 ಬಿಲಿಯನ್‌ ಅಮೆರಿಕನ್ ಡಾಲರ್‌ ಠೇವಣಿಗಳು ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ನಿಯಂತ್ರಣಕ್ಕೆ ಒಳಪಟ್ಟಿದೆ.
ಎಫ್‌ಡಿಐಸಿ ಹೊಸ ನ್ಯಾಷನಲ್ ಬ್ಯಾಂಕ್ ಆಫ್ ಸಾಂಟಾ ಕ್ಲಾರಾ ಅನ್ನು ರಚಿಸಿದ್ದು, ಇದು ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲ ಸೊತ್ತುಗಳನ್ನು ನಿಯಂತ್ರಿಸಲಿದೆ. ಸೋಮವಾರ ಬೆಳಗ್ಗೆ ಬ್ಯಾಂಕ್‌ನ ಎಲ್ಲಾ ಶಾಖೆಗಳನ್ನು ತೆರೆಯಲಾಗುತ್ತಿದ್ದು, ಠೇವಣಿದಾರರು ತಮ್ಮ ವಿಮೆ ಠೇವಣಿಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಎಫ್‌ಡಿಐಸಿಯು ಪ್ರಕಟಣೆಯ ಮೂಲಕ ತಿಳಿಸಿದೆ.
ಸಂಪೂರ್ಣವಾಗಿ ಮುಳುಗಿರುವ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ್ನು ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಖರೀದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top