ಕೇರಳದಲ್ಲಿ 54 ಡಿಗ್ರಿ ಸೆಲ್ಸಿಯಸ್ ದಾಖಲು
ತಿರುವನಂತಪುರಂ : ಕರಾವಳಿ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲಿ ತಾಪಮಾನ ಮರುಭೂಮಿಯನ್ನೂ ಮೀರಿಸಿ ಹೆಚ್ಚುತ್ತಿದೆ. ನಿನ್ನೆ ಕೇರಳದಲ್ಲಿ ತಾಪಮಾನ ಹೊಸ ದಾಖಲೆ ಬರೆದಿದ್ದು, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ರಾಜಸ್ಥಾನದ ಮರುಭೂಮಿಯಲ್ಲಿ ಕಡುಬೇಸಿಗೆಯಲ್ಲಿ ದಾಖಲಾಗುವ ತಾಪಮಾನದ ಆಸುಪಾಸಿನಲ್ಲಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ಗುರುವಾರ ದಿನನಿತ್ಯದ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಉಷ್ಣಗಾಳಿ ಬೀಸುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.
ಗುರುವಾರ ಐದು ಜಿಲ್ಲೆಗಳಾದ ಕೋಝಿಕ್ಕೋಡ್, ಅಲಪ್ಪುಳ, ಕೋಟ್ಟೆಯಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನಲ್ಲಿ ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.
ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಮಾಹಿತಿಯ ಪ್ರಕಾರ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ.