ಪುತ್ತೂರು: ಅತ್ಯಂತ ಪಾವಿತ್ರ್ಯತೆ ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಬಹುದಿನಗಳ ಬೇಡಿಕೆಯಾಗಿದ್ದು, ಇದೀಗ 35 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ತರಿಸಿಕೊಂಡು, ಇನ್ನಷ್ಟು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ ಅಭಿವೃದ್ಧಿಗಾಗಿ ಪುಡಾದ 35 ಲಕ್ಷ ರೂ. ಅನುದಾನದ ಕಾಮಗಾರಿಗೆ ಶನಿವಾರ ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುಷ್ಕರಿಣಿ ಧಾರ್ಮಿಕ ಮಹತ್ವವನ್ನು ಹೊಂದಿದೆ. ಆದ್ದರಿಂದ ಈ ಕೆರೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹಂತಹಂತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದರು.
ಗೋಶಾಲೆಗೆ 19 ಎಕ್ರೆ ಜಾಗ ಗುರುತು:
ಈಗಾಗಲೇ ದೇವಸ್ಥಾನದ ಗೋಶಾಲೆಗೆ 19 ಎಕ್ರೆ ಜಾಗ ಗುರುತಿಸಿ ವ್ಯವಸ್ಥಿತ ಗೋಶಾಲೆ ತೆರೆಯಲು ಸರಕಾರ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಜಾಗ ಗುರುತಿಸುವ ಕೆಲಸ ಶೀಘ್ರ ಆಗಲಿದೆ ಎಂದು ಶಾಸಕರು ಹೇಳಿದರು.
ಪ್ರಕೃತಿಗೆ ಕೊಡುಗೆ:
ವಾಹನ ದಟ್ಟಣೆ ಪರಿಹರಿಸುವ ನಿಟ್ಟಿನಲ್ಲಿ ಪುತ್ತೂರು ನಗರದಲ್ಲಿ ಎಲ್ಲೆಲ್ಲಿ ಅಪಾಯಕಾರಿ ವೃತ್ತ ಇದೆ ಎಂಬುದನ್ನು ಗುರತಿಸಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಪೂರಕವಾಗಿ ಶನಿವಾರ ಪುತ್ತೂರು ನಗರದ ಮಯೂರದ ಬಳಿ ಮುಖ್ಯರಸ್ತೆಯಿಂದ ಉರ್ಲಾಂಡಿ ಬೈಪಾಸ್ ಸಂಪರ್ಕ ರಸ್ತೆ ಅಗಲೀಕರಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದ ಅವರು, ನಗರ ಯೋಜನಾ ಪ್ರಾಧಿಕಾರ ಇಂದು ಅಭಿವೃದ್ಧಿ ಪರ ಚಿಂತನೆಯಿಂದ ಪ್ರಕೃತಿಗೆ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಕಟ್ ಕನ್ವರ್ಷನ್ ಸಮಸ್ಯೆ ಪರಿಹಾರಕ್ಕೆ ಚರ್ಚೆ
ಈಗಾಗಲೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರು ಹಾಗೂ ಸಂಸದರಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳವ ಕೆಲಸ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಬನ್ನೂರು ಕೆರೆಗೆ 1.75 ಕೋಟಿ ಅಂದಾಜು ಪಟ್ಟಿ ತಯಾರಿ : ಭಾಮಿ ಅಶೋಕ್ ಶೆಣೈ
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮಾತನಾಡಿ, ನಗರ ಸೇರಿದಂತೆ ಹೊರವಲಯದ ಹಲವು ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಈಗಾಗಲೇ ಬನ್ನೂರು ಕೆರೆ ಅಭಿವೃದ್ಧೀಗೆ 1.75 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಪ್ರಕ್ರಿಯೆ ಕೇವಲ ನಾಲ್ಕು ದಿನಗಳಲ್ಲಿ ನಿರ್ಐಯ ತೆಗೆದುಕೊಂಡು ಮಾಡಲಾಗಿದೆ ಎಂದ ಅವರು, ದೇವಸ್ಥಾನದ ಕೆರೆ ಅಭಿವೃದ್ಧಿಗೆ 35 ಲಕ್ಷ ರೂ. ಅನುದಾನ ಪುಡಾ ವತಿಯಿಂದ ನೀಡಲಾಗಿದ್ದು, ಅನುದಾನ ನೀಡುವಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪಾತ್ರ ಮಹತ್ವದ್ದಾಗಿದೆ. ಇನ್ನಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಚಕ್ರದಿಂದ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಪುಷ್ಕರಣಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವಲ್ಲಿ ಪುತ್ತೂರು ಶಾಸಕರು ಸೇರಿದಂತೆ ಎಲ್ಲರೂ ಕೈಜೋಡಿಸುವಿಕೆಯಿಂದ ಆಗಿದೆ. ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಸರಿಯಾದ ರೀತಿಯಲ್ಲಿ ಸಾಗುತ್ತಿದೆ ಎಂದರು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ರಮೇಶ್ ಭಟ್, ಜಯಶ್ರೀ ಶೆಟ್ಟಿ, ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಅಪೂರ್ವ ಪ್ರಾರ್ಥನೆ ಹಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ವಂದಿಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ವೀಣಾ ಬಿ.ಕೆ.ಶೇಖರ್ ನಾರಾವಿ, ಮ್ಯಾನೇಜರ್ ಹರೀಶ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.