ಡೆಹ್ರಾಡೂನ್: ಪೂರ್ವ ಲಡಾಖ್ ನ ಗಡಿ ವಾಸ್ತವ ರೇಖೆಯ ಬೆಟಾಲಿಯನ್ ನ ಮೊದಲ ಮಹಿಳಾ ಕಮಾಂಡರ್ ಆಗಿ ಕರ್ನಲ್ ಗೀತಾ ರಾಣಾ ನೇಗಿ ಆಯ್ಕೆಯಾಗಿದ್ದಾರೆ. ಇವರು ಬೆಟಾಲಿಯನ್ ಆಫ್ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗೆ ಸೇರಿದವರು. ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರಿಗೆ ಇಂತಹ ಕಮಾಂಡ್ ನೀಡಲಾಗಿದೆ. ಕಮಾಂಡರ್‌ಗಳ ಪಾತ್ರದಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲು ಸೇನೆಯು ಇತ್ತೀಚೆಗೆ ಸರ್ಕಾರದ ಅನುಮೋದನೆಯನ್ನು ಪಡೆದಿತ್ತು. ಕರ್ನಲ್ ನೇಗಿ ಈ ಸಾಧನೆ ಮಾಡಿದ ಮೊದಲ ಅಧಿಕಾರಿಯಾಗಿದ್ದಾರೆ. ಕರ್ನಲ್ ಉತ್ತರಾಖಂಡ್‌ನ ಪೌರಿಯಿಂದ ಬಂದವರು, ದೇಶಕ್ಕೆ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರನ್ನು ನೀಡಿದ ರಾಜ್ಯ ಉತ್ತರಾಖಂಡ.
ಭಾವನಾ ಕಾಂತ್, ಮೋಹನ ಸಿಂಗ್, ಅವನಿ ಚತುರ್ವೇದಿ. ಗೀತಾ ರಾಣಾ ನೇಗಿ ಇವರೆಲ್ಲರೂ ಮಹಿಳೆಯರು, ಇವರಲ್ಲಿ ದೇಶ ಕಾಯುವ ಸೈನಿಕರ ಉತ್ಸಾಹವಿದೆ. ಮೂವರೂ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಯುದ್ಧ ಪೈಲಟ್‌ಗಳಾಗಿದ್ದರೆ, ಪೂರ್ವ ಲಡಾಖ್‌ನಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ನಿಯೋಜಿಸಲಾದ ಸ್ವತಂತ್ರ ಫೀಲ್ಡ್ ಬೆಟಾಲಿಯನ್‌ಗೆ ಕಮಾಂಡ್ ಮಾಡಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಗೀತಾ.
ಕರ್ನಲ್ ಗೀತಾ, ಪ್ರಸ್ತುತ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ನಲ್ಲಿ ಹುದ್ದೆಗೆ ಸೇರ್ಪಡೆಯಾಗಿದ್ದಾರೆ ಎಂದು ಡೆಹ್ರಾಡೂನ್‌ನ ರಕ್ಷಣಾ ವಿಭಾಗದ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಕರ್ನಲ್ ಗೀತಾ ಅವರ ತಾಯಿಯ ಮನೆ ಪೌರಿ ಜಿಲ್ಲೆಯ ದಂಗು ದುಗಡ್ಡಾದಲ್ಲಿದೆ. ಇವರು ಸೈನಿಕರ ಕುಟುಂಬದಿಂದ ಬಂದವರಾಗಿದ್ದು, ಇವರ ತಂದೆ ಕಿರ್ಪಾಲ್ ಸಿಂಗ್ ರಾಣಾ ಸೇನೆಯ ಮಹಾರ್ ರೆಜಿಮೆಂಟ್‌ನಿಂದ ಗೌರವ ಕ್ಯಾಪ್ಟನ್ ಆಗಿ ನಿವೃತ್ತರಾದರು.
ಕರ್ನಲ್ ಗೀತಾ ಹುಟ್ಟಿದ್ದು ಲುಧಿಯಾನದಲ್ಲಿ. ಇವರ ಪೋಷಕರು ಬರೇಲಿಯಲ್ಲಿ ವಾಸಿಸುತ್ತಿದ್ದಾರೆ. ಗೀತಾ ಅವರು ನಾರಾಯಣಬಗಡದ ಕೇವಾರ್ ತಲ್ಲಾ ಗ್ರಾಮದ ನಿವಾಸಿ ಸಿದ್ಧಾರ್ಥ್ ನೇಗಿ ಅವರನ್ನು ವಿವಾಹವಾಗಿದ್ದಾರೆ. ಅವರು ನೈಸರ್ಗಿಕ ಮತ್ತು ಸಾವಯವ ಕೃಷಿಯೊಂದಿಗೆ ಒರಟಾದ ಧಾನ್ಯಗಳ ಸಂರಕ್ಷಣೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಧಿಕಾರಿಯ ಸಾಧನೆಯನ್ನು ಉತ್ತರಾಖಂಡದಲ್ಲಿ ಸ್ಥಳೀಯರು ಸಂಭ್ರಮಿಸಿದ್ದಾರೆ.
ಸಶಸ್ತ್ರ ಪಡೆಗಳ ಹೊರಗಿನ ಪ್ರಪಂಚಕ್ಕೆ, ಈ ಅಧಿಕಾರಿಗಳು ಭಾರತದ ಬೆಳೆಯುತ್ತಿರುವ ಮಹಿಳಾ ಶಕ್ತಿಯ ಪ್ರತಿಬಿಂಬವಾಗಿದೆ. ಆದರೆ ಸೇನಾಪಡೆಯೊಳಗೆ ನೇಮಕಗೊಂಡ ಮಹಿಳೆಯರಿಗೂ ಪುರುಷರಂತೆ ಅವರ ಅರ್ಹತೆಯ ಆಧಾರದ ಮೇಲೆ ಗೌರವ, ಸ್ಥಾನಮಾನ, ಬಡ್ತಿಗಳು ದೊರಕುತ್ತವೆ.