ಬೊಮ್ಮಾಯಿ ಅಧ್ಯಕ್ಷ : ಯಡಿಯೂರಪ್ಪ, ಕಟೀಲ್ ಸದಸ್ಯರು
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿರುವ ಚುನಾವಣಾ ಪ್ರಚಾರ ಸಮಿತಿಯನ್ನು ಬಿಜೆಪಿ ರಚಿಸಿದೆ. ಈ ಸಮಿತಿಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಸ್ಥಾನವಿದ್ದು, ಸದಸ್ಯರಾಗಿ ಅವರ ಹೆಸರನ್ನು ಸೇರಿಸಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವೆ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಸಚಿವ ಆರ್. ಅಶೋಕ್, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಸಿ.ಸಿ. ಪಾಟೀಲ್, ಕೆ. ಸುಧಾಕರ್, ಸಿ.ಟಿ. ರವಿ ಮತ್ತಿತ್ತರ ಸಚಿವರು ಸಮಿತಿಯಲ್ಲಿ ಇದ್ದಾರೆ.
ಶೋಭಾ ಕರಂದ್ಲಾಜೆ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಅವರು ಮುಖ್ಯ ಸದಸ್ಯರಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಭಾಪತಿಗಳಾದ ರಘುನಾಥರಾವ್ ಮತ್ತಿತರ ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು ಇದ್ದಾರೆ.
ವಿಧಾನಸಭಾ ಚುನಾವಣೆಗೆ ಚುನಾವಣಾ ಪ್ರಣಾಳಿಕೆ ಕುರಿತು ಬಿಜೆಪಿ ಸಮಾಲೋಚನೆ ಆರಂಭಿಸಿದೆ. ಪಕ್ಷದ ಭರವಸೆಗಳು ಸಾರ್ವಜನಿಕರ ಭಾವನೆಗಳಿಗೆ ಕನ್ನಡಿ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಪ್ರಣಾಳಿಕೆ ಸಮಿತಿಯು 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಲೋಚನೆ ಪ್ರಕ್ರಿಯೆ ಆರಂಭಿಸಿದೆ.
ಉಚಿತ ವಿದ್ಯುತ್, ಗೃಹಿಣಿಯರಿಗೆ ನಗದು ಪ್ರೋತ್ಸಾಹ ಮತ್ತು 10 ಕೆಜಿ ಉಚಿತ ಅಕ್ಕಿ ಭರವಸೆ ನೀಡಿದ ನಂತರ ಕಾಂಗ್ರೆಸ್ ಈಗಾಗಲೇ ಸಾಕಷ್ಟು ಬಲವನ್ನು ಪಡೆದುಕೊಂಡಿರುವುದರಿಂದ ಬಿಜೆಪಿ ಏನು ಮಾಡಲಿದೆ ಎಂಬ ಕುತೂಹಲ ಕೆರಳಿಸಿದೆ.