ಸಭಾಕಂಪನವನ್ನು ಗೆಲ್ಲಲು ಸಾಧ್ಯ

ಒಳಗಿನ ಒತ್ತಡ ನಿರ್ವಹಣೆಗೆ ಇಲ್ಲಿವೆ ಒಳ್ಳೆಯ ಟಿಪ್ಸ್

ಈ ಸಭಾಕಂಪನ (ಸ್ಟೇಜ್ ಫಿಯರ್‌) ಎನ್ನುವುದು ನೂರಾರು ಒಳ್ಳೆಯ ಭಾಷಣದ ಪ್ರತಿಭೆಗಳನ್ನು ಕೊಂದುಹಾಕಿದೆ. ಈ ಕಂಪನವನ್ನು ಗೆಲ್ಲಲು ಸಾಧ್ಯ ಇದೆಯೇ?
ಭಾಷಣ ಎನ್ನುವುದು ಒಂದು ಶ್ರೇಷ್ಟವಾದ ಕಲೆ. ಶ್ರೇಷ್ಠವಾದ ಭಾಷಣಕಾರ ಒಂದು ಇಡೀ ಸಮೂಹವನ್ನು ಪ್ರಭಾವಿಸಬಲ್ಲ. ಸಾವಿರಾರು ಮಂದಿಗೆ ಏಕಕಾಲದಲ್ಲಿ ಪ್ರೇರಣೆ ಕೊಡಬಲ್ಲ. ಮಾಹಿತಿಗಳ ರವಾನೆಗೆ ಭಾಷಣ ಅತ್ಯುತ್ತಮ ಮಾಧ್ಯಮ ಆಗಿದೆ. ಭಾಷಣದ ಮೂಲಕ ಮನರಂಜನೆ ಕೊಡುವ ಒಳ್ಳೆಯ ಭಾಷಣಕಾರರ ಸಂಖ್ಯೆ ಕೂಡ ತುಂಬಾ ದೊಡ್ಡದಿದೆ. ಒಬ್ಬ ಪ್ರಬುದ್ಧ ಭಾಷಣಕಾರ ವೇದಿಕೆಯಲ್ಲಿ ನಿಂತು ಮಾತಾಡುವಾಗ ಪ್ರೇಕ್ಷಕ ಸಮೂಹ ಮೈಮರೆತು ಕೇಳುವ ವಾತಾವರಣವನ್ನು ಸೃಷ್ಟಿ ಮಾಡಬಲ್ಲ. ಒಳ್ಳೆಯ ಭಾಷಣಕಾರರಿಗೆ ಅತಿ ಹೆಚ್ಚು ಬೇಡಿಕೆ ಇರುತ್ತದೆ.

ಸಭಾಕಂಪನ ಎಂಬ ಒತ್ತಡ































 
 

ನಮ್ಮ ಒತ್ತಡವನ್ನು ಕಳೆಯುವ ಎರಡು ಸ್ಥಳಗಳು ಇವೆ. ಒಂದು ಶೌಚಾಲಯ. ಇನ್ನೊಂದು ಭಾಷಣದ ವೇದಿಕೆ ಎಂದು ಸಾಕ್ರೆಟಿಸ್ ಹೇಳಿದ್ದನು.
ಭಾಷಣವನ್ನು ಮಾಡಲು ವೇದಿಕೆ ಏರಿದಾಗ ಕಣ್ಣಲ್ಲಿ ಭಯ ಕಾಣಿಸುವುದು, ಹೃದಯ ಬಡಿತ ವೇಗವಾಗುವುದು, ಮೈ ಇಡೀ ಬಿಸಿ ಆಗುವುದು, ಕಣ್ಣ ಮುಂದೆ ಕತ್ತಲೆಯ ಪರದೆ ಕಾಣಿಸುವುದು, ಕಾಲರ್ ಹಿಂದೆ ಬಿಸಿ ಆಗುವುದು, ಸಿದ್ಧತೆ ಮಾಡಿದ ಅಂಶಗಳು ಮರೆತುಹೋಗುವುದು, ಗಂಟಲ ಪಸೆ ಆರಿಹೋಗುವುದು, ಮೈ ಎಲ್ಲ ಬೆವರುವುದು…ಮೊದಲಾದ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಿರಬಹುದು. ಈ ಲಕ್ಷಣಗಳಿಗೆ ‘ಸಭಾಕಂಪನ ‘ ಎಂದು ಹೆಸರು. ಅವುಗಳು ಸಿಂಪ್ಟಮ್ (ರೋಗ ಚಿಹ್ನೆ) ಅಲ್ಲ. ಸಭಾಕಂಪನ ನಿಮ್ಮಲ್ಲಿ ಇದೆ ಎಂದಾದರೆ ನಿಮ್ಮ ಆರೋಗ್ಯ ಸರಿ ಇದೆ ಎಂದರ್ಥ.
ಆ ಸಭಾಕಂಪನವನ್ನು ಯಾರೂ ಗೆದ್ದವರಿಲ್ಲ. ಎಂತಹ ಮಹಾನ್ ಭಾಷಣಕಾರರು ಕೂಡ ತಮ್ಮ ಆರಂಭಿಕ ದಿನಗಳಲ್ಲಿ ಸಭಾ ಕಂಪನವನ್ನು ಎದುರಿಸಿದವರೇ ಆಗಿದ್ದಾರೆ. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ 1893ರಲ್ಲಿ ಮಾಡಿದ ಭಾಷಣ ವಿಶ್ವಮಟ್ಟದ ಕೀರ್ತಿಯನ್ನು ಪಡೆಯಿತು ಎಂದು ನಮಗೆ ಗೊತ್ತಿದೆ. ಆದರೆ ಅದರ ಹಿಂದಿನ ರಾತ್ರಿ ಸ್ವಾಮೀಜಿ ಆತಂಕದಲ್ಲಿ ನಿದ್ದೆ ಕೂಡ ಮಾಡಿರಲಿಲ್ಲ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ. ನಾನು ಇಷ್ಟಪಡುವ ಅನೇಕ ಶ್ರೇಷ್ಠರಾದ ಭಾಷಣಕಾರರು, ಅಟಲ್ ಬಿಹಾರಿ ವಾಜಪೇಯಿಯಂತವರು ಕೂಡ ತಮಗೆ ಸಭಾಕಂಪನ ಇತ್ತು ಎಂದು ಒಪ್ಪಿಕೊಂಡಿದ್ದಾರೆ.

ಸಭಾಕಂಪನ ಉಂಟಾಗುವುದು ಯಾಕೆ

ಯಾವುದೇ ಹೊಸ ಸನ್ನಿವೇಶವನ್ನು ನಾವು ಎದುರಿಸುವಾಗ ಅದಕ್ಕೆ ಪೂರಕವಾಗಿ ನಮ್ಮ ದೇಹವನ್ನು ಸಿದ್ಧಪಡಿಸುವ ಒಂದು ಆರೋಗ್ಯಪೂರ್ಣ ವ್ಯವಸ್ಥೆ ನಮ್ಮ ದೇಹದಲ್ಲಿದೆ. ನಮ್ಮ ದೇಹದಲ್ಲಿ ಇರುವ ಅಡ್ರಿನಲ್ ಎಂಬ ಗ್ರಂಥಿ ಅಡ್ರಿನಲಿನ್ ಎಂಬ ಹಾರ್ಮೋನನ್ನು ಸ್ರವಿಸುವುದು ಇದಕ್ಕೆ ಕಾರಣ. ಈ ಹಾರ್ಮೋನ್ ನಮ್ಮ ರಕ್ತದಲ್ಲಿ ಹರಿದು ನಮ್ಮ ದೇಹದಲ್ಲಿ ಮೇಲೆ ಉಲ್ಲೇಖ ಮಾಡಿದ ಲಕ್ಷಣಗಳನ್ನು ಉಂಟುಮಾಡುತ್ತದೆ. ಅಂದರೆ ಆ ಹಾರ್ಮೋನ್ ನಮ್ಮನ್ನು ಒಳ್ಳೆಯ ಭಾಷಣಕ್ಕೆ ಸಿದ್ಧಪಡಿಸುತ್ತದೆ ಹೊರತು ನಿಮ್ಮನ್ನು ಖಾಲಿ ಮಾಡುವುದಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಲಕ್ಷಣಗಳು ಭಾಷಣದ ಆರಂಭದಲ್ಲಿ ಮಾತ್ರ ಕಾಣಿಸುವ ಅಂಶಗಳು. ಆದರೆ ನಾವು ಅನವಶ್ಯಕವಾಗಿ ಭಯಪಟ್ಟು ಅದನ್ನು ಭಾಷಣದ ಕೊನೆಯವರೆಗೆ ಎಳೆದುಕೊಂಡು ಹೋಗುತ್ತೇವೆ. ಇನ್ನೂ ಕೆಲವರು ಭಾಷಣವನ್ನೇ ಆರಂಭ ಮಾಡದೆ ಈ ಒತ್ತಡವನ್ನು ಫೀಲ್ ಮಾಡಿ ಕುಸಿಯುತ್ತಾರೆ.
ಈ ಸಭಾಕಂಪನ ಸಾವಿರಾರು ಭಾಷಣದ ಪ್ರತಿಭೆಗಳ ಉಸಿರುಗಟ್ಟಿಸಿದೆ.

ಸಭಾಕಂಪನವನ್ನು ಗೆಲ್ಲುವುದು ಹೇಗೆ?

ಈ ಸಭಾಕಂಪನವನ್ನು ಗೆಲ್ಲುವುದು ಸಾಧ್ಯವೇ ಇಲ್ಲ. ಆದರೆ ಕೆಲವು ಮಾನಸಿಕ ಸಿದ್ಧತೆಗಳನ್ನು ಮಾಡಿಕೊಂಡರೆ ಅದನ್ನು ತಕ್ಕಮಟ್ಟಿಗೆ ನಿರ್ವಹಣೆ ಮಾಡಲು ಕಲಿಯಬಹುದು. ಅದು ಕೂಡ ನಿರಂತರ ಪ್ರಯತ್ನದ ಮೂಲಕ ಸಾಧ್ಯ ಆಗುತ್ತದೆ. ನಾನು ಮಾಡಿದ ಸಾವಿರಾರು ಭಾಷಣ ಕಲೆಯ ಕಾರ್ಯಾಗಾರಗಳ ಅನುಭವದ ಆಧಾರದ ಮೇಲೆ ಸಭಾಕಂಪನದ ನಿರ್ವಹಣೆಯ ಈ ಟಿಲ್ಸ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಇಲ್ಲಿವೆ ಟಿಪ್ಸ್‌ಗಳು..

1) ಸಭಾಕಂಪನ ಅನುಭವಿಸುವವರಲ್ಲಿ ನೀವು ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಅದು ನಿಮ್ಮನ್ನು ಉತ್ತಮ ಭಾಷಣಕ್ಕೆ ಸಿದ್ಧಪಡಿಸುವ ಒಂದು ಇನ್‌ಬಿಲ್ಟ್ ಸಿಸ್ಟಮ್ ಎಂದು ತಿಳಿದಾಗ ನಿಮ್ಮ ಆತಂಕವು ಸಹಜವಾಗಿ ಕಡಿಮೆ ಆಗುತ್ತದೆ.

2) ಭಾಷಣಕ್ಕೆ ಉತ್ತಮ ತಯಾರಿಯು ನಿಮ್ಮ ಸಹಜ ಆತಂಕವನ್ನು ಕಡಿಮೆ ಮಾಡುತ್ತದೆ. ಸಾವಿರಾರು ಭಾಷಣಗಳನ್ನು ಮಾಡಿದ ನಂತರವೂ ಸರಿಯಾದ ಸಿದ್ಧತೆ ಮಾಡದೆ ಭಾಷಣ ಮಾಡಬೇಡಿ. ಸರಿಯಾದ ರಿಹರ್ಸಲ್ ಕೂಡ ಅಷ್ಟೇ ಮುಖ್ಯ.

3) ತಯಾರಿಯ ಹಂತದಲ್ಲಿ ಇಡೀ ಭಾಷಣವನ್ನು ವಿಷ್ಯುವಲೈಸ್ ಮಾಡಿಕೊಳ್ಳುವುದು ಕೂಡ ತುಂಬ ಅಗತ್ಯ. ಉದಾಹರಣೆಗೆ ನೀವು ವೇದಿಕೆಯಲ್ಲಿ ಅತಿಥಿಗಳ ನಡುವೆ ಕುಳಿತಿರುತ್ತೀರಿ, ನಿಮ್ಮ ಹೆಸರನ್ನು ಉದ್ಘೋಷಕರು ಘೋಷಣೆ ಮಾಡುತ್ತಾರೆ, ನೀವು ಎದ್ದು ಪೋಡಿಯಮ್ ಕಡೆಗೆ ಹೋಗುತ್ತೀರಿ, ಮೈಕ್ ಎತ್ತರವನ್ನು ಹೊಂದಿಕೆ ಮಾಡಿಕೊಳ್ಳುತ್ತೀರಿ…ಇತ್ಯಾದಿ.

4) ಸಿದ್ಧತೆಯ ಹಂತದಲ್ಲೇ ನಿಮ್ಮ ಭಾಷಣಕ್ಕೆ ಒಂದು ಉತ್ತಮ ಆರಂಭವನ್ನು ಪ್ಲಾನ್ ಮಾಡಿಕೊಳ್ಳಿ. ಒಂದು ಒಳ್ಳೆಯ ಗಾದೆ, ನುಡಿಕಟ್ಟು, ಕೊಟೇಶನ್, ಸದಭಿರುಚಿಯ ಜೋಕ್, ಒಂದು ಕವಿತೆಯ ಸಾಲು, ಒಂದು ಒಳ್ಳೆಯ ಸ್ಟೋರಿ ನಿಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತದೆ. ಆದರೆ ಇವೆಲ್ಲವೂ ನಿಮ್ಮ ಅಂದಿನ ಭಾಷಣದ ಮುಖ್ಯ ಥೀಮ್‌ಗೆ ಪೂರಕ ಆಗಿರಬೇಕು ಅನ್ನುವುದು ಬಾಟಮ್ ಲೈನ್.

5) ಸಭೆ ನಡೆಯುವ ಸ್ಥಳಕ್ಕೆ ಸಾಕಷ್ಟು ಮುಂಚಿತವಾಗಿ ಹೋಗಿ ಅಲ್ಲಿ ಪ್ರೇಕ್ಷಕರ ಜೊತೆಗೆ ಒಂದಿಷ್ಟು ಹೊತ್ತು ಬೆರೆತು ಮಾತಾಡಿದರೆ ನಿಮ್ಮ ಒತ್ತಡ ಕಡಿಮೆ ಆಗುವುದು ಖಂಡಿತ. ನೀವು ಆ ಸನ್ನಿವೇಶಕ್ಕೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಅಗತ್ಯ.

6) ನಿಮ್ಮ ಭಾಷಣಕ್ಕಿಂತ ಮೊದಲು ವೇದಿಕೆಯಲ್ಲಿ ಕುಳಿತ ಇತರ ಅತಿಥಿಗಳ ಜತೆಗೆ ನಿಮ್ಮ ಆಪ್ತ ಮಾತುಗಳು ನಿಮ್ಮ
ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ.

7) ನಿಮ್ಮ ಭಾಷಣದ ಆರಂಭವು ಅತ್ಯುತ್ತಮ ಆಗಿರಬೇಕು ಎಂದು ನೀವು ನಿರ್ಧಾರ ಮಾಡಿ. ತಯಾರಿಯ ಹಂತದಲ್ಲಿಯೆ ಅದನ್ನು ಪ್ಲಾನ್ ಮಾಡಿರಿ. ನಿಮ್ಮ ಭಾಷಣದ ಆರಂಭದ ಒಂದೆರಡು ನಿಮಿಷಗಳು ಬಹಳ ಪ್ರಾಮುಖ್ಯ. ಆ ಅವಧಿಯಲ್ಲಿ ಪ್ರೇಕ್ಷಕರನ್ನು ನಿಮ್ಮ ಭಾಷಣದ ಕಡೆಗೆ ಸೆಳೆಯುವ ಪ್ರಯತ್ನ ಆಗಬೇಕು. ಆರಂಭದ ಬ್ಲಾಸ್ಟ್ ಚೆನ್ನಾಗಿ ಬಂತು ಎಂದರೆ ನೀವು ಅರ್ಧ ಗೆಲ್ಲುತ್ತೀರಿ. (ವಿವೇಕಾನಂದರ ಅಮೆರಿಕಾದ ಐತಿಹಾಸಿಕ ಭಾಷಣದ ಆರಂಭ ನೆನಪು ಮಾಡಿಕೊಳ್ಳಿ). ಈ ಸುಂದರವಾದ ಒಂದೆರಡು ನಿಮಿಷಗಳನ್ನು ಅವರೇ, ಇವರೇ…. ಎಂದು ಉದ್ದಕ್ಕೆ ಸಂಬೋಧನೆ ಮಾಡುತ್ತಾ ಹಾಳು ಮಾಡಬೇಡಿ. ಅಧ್ಯಕ್ಷರೇ, ಅತಿಥಿಗಳೇ ಮತ್ತು ಸಭಾಸದರೇ… ಇಷ್ಟು ಸಾಕು.

8) ಉತ್ತಮವಾದ ಧ್ವನಿ ಭಾಷಣಕಾರನ ಪ್ರಬಲವಾದ ಅಸ್ತ್ರ. ಅದನ್ನು ಉತ್ತಮ ತರಬೇತಿಯ ಮೂಲಕ ಹುರಿಗೊಳಿಸಲು ಸಾಧ್ಯ. ನಿಮ್ಮ ನಾಭಿಯಿಂದ ಹೊರಡುವ ಬೇಸ್ ವಾಯ್ಸ್ ನಿಮ್ಮನ್ನು ಗೆಲ್ಲಿಸುತ್ತದೆ.

9) ಧ್ವನಿವರ್ಧಕದ ಸೂಕ್ತವಾದ ಬಳಕೆಯು ಅತಿ ಅಗತ್ಯ. ಅದನ್ನು ಕಲಿಯಲು ತುಂಬಾ ಕಷ್ಟ ಇಲ್ಲ. ನಿಮ್ಮ ತುಟಿಗಳಿಂದ ಕನಿಷ್ಠ ಒಂದು ಅಡಿ ದೂರ ಇರುವ ಹಾಗೆ ನೋಡಿಕೊಂಡರೆ ಉತ್ತಮ. ಅದು ನಿಮ್ಮ ಮುಖಕ್ಕಿಂತ ಒಂದೆರಡು ಇಂಚು ಕೆಳಗೆ ಇರುವ ಹಾಗೆ ನೋಡಿಕೊಳ್ಳಿ.

10) ನೀವು ಮಾತಾಡುವಾಗ ನಿಮ್ಮ ಶಬ್ದಗಳಿಗಿಂತ ನಿಮ್ಮ ದೇಹ ಭಾಷೆಯು ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ ಎಂದು ನಿಮಗೆ ತಿಳಿದಿರಲೆಬೇಕು. ಅದರ ಬಗ್ಗೆ ಸ್ವಲ್ಪ ತರಬೇತಿ ನಿಮಗೆ ಬೇಕು.

11) ನಿಮ್ಮ ಒಳಗೆ ಇರುವುದಕ್ಕಿಂತ ಹೊರಗೆ ಹೆಚ್ಚು ಕಾನ್ಫಿಡೆಂಟ್ ಆಗಿ ಕಾಣಿಸುತ್ತೀರಿ ಅನ್ನುವುದು ಬೇಸಿಕ್ ಸೈಕಾಲಜಿ. ಆದ್ದರಿಂದ ಭಯದ ಕಲ್ಪನೆ ಕೂಡ ಮಾಡಬೇಡಿ.

12) ಪ್ರೇಕ್ಷಕರ ಜತೆ ನಿಮ್ಮ ದೃಷ್ಟಿ ಸಂಪರ್ಕ (Eye Contact) ಒತ್ತಡವನ್ನು ಕಡಿಮೆ ಮಾಡುತ್ತದೆ. ನಗು ಜಗತ್ತಿನ ಅತ್ಯಂತ ಪ್ರಬಲ ಸಂವಹನ ಮಾಧ್ಯಮ. ನಗುಮುಖದ ಅಪಿಯರೆನ್ಸ್ ನಿಮ್ಮನ್ನು ಖಂಡಿತ ಗೆಲ್ಲಿಸುತ್ತದೆ. ಹಾಗೆಯೇ ಕಾರ್ಯಕ್ರಮದ ಆಶಯಕ್ಕೆ ಪೂರಕವಾದ ಡ್ರೆಸ್ ಕೋಡ್ ಕೂಡ.

13) ಹೆಚ್ಚು ಹೆಚ್ಚು ಭಾಷಣಗಳನ್ನು ಮಾಡುತ್ತಾ ಹೋದಂತೆ ನೀವು ತಕ್ಕಮಟ್ಟಿಗೆ ಒತ್ತಡ ನಿರ್ವಹಣೆ ಮಾಡುವುದನ್ನು ಕಲಿಯುತ್ತೀರಿ.

ಸದ್ಯಕ್ಕಿಷ್ಟು…!
ಗೆಲ್ಲಬೇಕು ಎಂದು ನೀವು ನಿರ್ಧಾರ ಮಾಡಿ ಹೊರಟರೆ ಶತ್ರುವೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಆಲ್ ದ ಬೆಸ್ಟ್.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top