ಕೇರಳದಲ್ಲೊಂದು ವಿಚಿತ್ರ ಪ್ರಕರಣ
ತಿರುವನಂತಪುರಂ : ಕೇರಳದ ವಕೀಲರೊಬ್ಬರು ತನ್ನ ಪತ್ನಿಯನ್ನೇ ಮರು ವಿವಾಹವಾಗಿದ್ದಾರೆ. ಆದರೆ ಮುಸ್ಲಿಂ ಧರ್ಮ ಕ್ಕೆ ಸೇರಿದ ವಕೀಲರ ಈ ನಡೆ ಕಟ್ಟರ್ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ. ಅವರೀಗ ವಕೀಲನಿಗೆ ಫತ್ವಾ ಹೊರಡಿಸಿದ್ದಾರೆ.
ವಿಶೇಷ ವಿವಾಹ ಕಾಯ್ದೆಯಡಿ ಸಿನೆಮಾ ನಟರೂ ಆಗಿರುವ ಸಿ. ಶುಕುರ್ ಎಂಬವರು ತನ್ನ ಪತ್ನಿಯನ್ನೇ ಮರುವಿವಾಹವಾಗಿದ್ದರು. ಈಗ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸರು ಅವರಿಗೆ ಭದ್ರತೆ ಒದಗಿಸಿದ್ದಾರೆ. ಶುಕುರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೆಲವು ಸಂಘಟನೆಗಳಿಂದ ಬೆದರಿಕೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕುರ್ ಪತ್ನಿ ಶೀನಾ ಕೂಡ ಉನ್ನತ ವಿದ್ಯಾವಂತೆ. ಮಹಾತ್ಮ ಗಾಂಧಿ ವಿವಿಯ ಮಾಜಿ ಉಪಕುಲಪತಿ ಅವರು. ಆಸ್ತಿಯ ಉತ್ತರಾಧಿಕಾರವನ್ನೂ ನಿರ್ಣಯಿಸುವ ಮುಸ್ಲಿಮ್ ವೈಯಕ್ತಿಕ ಕಾನೂನಿನ ಅಡಿಯ ವಿಶೇಷ ವಿವಾಹ ಕಾಯ್ದೆಯಡಿ ದಂಪತಿಗಳು ಮರುವಿವಾಹವಾಗಿದ್ದರು.
ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಹಾಗೆಂದು ಅವರು ವಿಚ್ಛೇದನ ಪಡೆದುಕೊಂಡಿರಲಿಲ್ಲ ಅಥವಾ ಅವರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಮತ್ತೇಕೆ ಅವರು ಮರು ಮದುವೆಯಾದರು ಎಂಬ ಅನುಮಾನ ಕಾಡುತ್ತಿರಬಹುದು.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಗಂಡು ಮಕ್ಕಳು ಇಲ್ಲದಿದ್ದರೆ ಸಂಪಾದಿಸಿದ ಆಸ್ತಿಯಲ್ಲಿ ಹೆಣ್ಣುಮಕ್ಕಳು ಮೂರನೇ ಎರಡರಷ್ಟು ಮಾತ್ರ ಪಡೆಯುತ್ತಾರೆ ಮತ್ತು ಉಳಿದ ಆಸ್ತಿ ತಂದೆಯ ಸಹೋದರರ ಪಾಲಾಗುತ್ತದೆ. ಇದನ್ನು ತಪ್ಪಿಸಿ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಪೂರ್ತಿಯಾಗಿ ಉಳಿಸಿಕೊಡಲು ದಂಪತಿ ಮರಮದುವೆಯಾಗಿದ್ದಾರೆ. ಮರುಮದುವೆಯಾದರೆ ಆಸ್ತಿಯ ಪೂರ್ತಿ ಹಕ್ಕು ಹೆಣ್ಣು ಮಕ್ಕಳಿಗೆ ಸಿಗುತ್ತದೆಯಂತೆ.
ಇದು ಸಲಾಂ ಧರ್ಮದ ಮೇಲಾಗಿರುವ ದ್ರೋಹ ಎಂದು ಕೆಂಡವಾಗಿರುವ ಮೌಲ್ವಿಗಳು ಈ ಕುಟುಂಬದ ವಿರುದ್ಧ ಫತ್ವಾಗಳನ್ನು ಹೊರಡಿಸಿದ್ದಾರೆ. ಕೇರಳದ ಪ್ರಮುಖ ಸುನ್ನಿ ಉನ್ನತ ಶಿಕ್ಷಣ ಸಂಸ್ಥೆ ಈ ದಂಪತಿಗಳ ನಡೆಗೆ ಅಸಮಾಧಾನ ಹೊರಹಾಕಿದ್ದು ಇವರು ಮುಸ್ಲಿಂ ವೈಯಕ್ತಿಕ ಕಾನೂನುಗಳು ಹಾಗೂ ಇಸ್ಲಾಮನ್ನು ಅವಮಾನ ಮಾಡಿದ್ದಾರೆ ಎಂದು ಹೇಳಿದೆ.