ಪುತ್ತೂರು: ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ 80 ಲಕ್ಷ ರೂ. ವೆಚ್ಚದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ನೆಲ್ಲಿಕಟ್ಟೆಯಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟ ಸುಮಾರು ಐದು ಕೋಟಿ ರೂ. ಕಾಮಗಾರಿಗಳಿಗೆ ಮುಂದಿನ ಒಂದು ವಾರದಲ್ಲಿ ಶಿಲಾನ್ಯಾಸ ಮಾಡಲಿದ್ದೇವೆ. ಪ್ರಸ್ತುತ ಉಪ್ಪಿನಂಗಡಿ, ಪುತ್ತೂರು, ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿರುವ ಶಾಲಾ ಕಾಲೇಜು, ಪದವಿ ಕಾಲೇಜುಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಅಲ್ಲದೆ ಉಪ್ಪಿನಂಗಡಿ ಪದವಿಪೂರ್ವ ಕಾಲೇಜು ಲೋಕಾರ್ಪಣೆ ಜತೆಗೆ ಶಿಲಾನ್ಯಾಸವನ್ನೂ ಮಾಡಲಾಗಿದೆ. ಹೀಗೆ ಬೇರೆ ಬೇರೆ ಅನುದಾನಗಳು ಸರಕಾರದಿಂದ ಬಂದಿದ್ದು ಶಿಕ್ಷಣ ಕ್ಷೇತ್ರಗಳ ಕಟ್ಟಡಕ್ಕೆ ವಿನಿಯೋಗ ಮಾಡಲಾಗಿದೆ ಎಂದ ಅವರು, ಶಾಸಕತ್ವದ ಐದು ವರ್ಷಗಳ ಅವಧಿಯಲ್ಲಿ ಮೂಲಭೂತ ಸೌಲಭ್ಯಗಳ ಜತೆಗೆ ವಿದ್ಯಾರ್ಥಿಗಳಿಗೆ ಬದುಕು ಕೊಡುವ, ಸಾಮಾಜಿಕ ಅರಿವು ಮೂಡಿಸುವ, ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಪ್ರಜಾಪ್ರಭುತ್ವ ನೆಲೆಯಲ್ಲಿ ಶಾಸಕನದ್ದಾಗಿದೆ. ಐದು ವರ್ಷಗಳ ಅವಧಿಯ ಕರ್ತವ್ಯದ ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ನನಗೆ ಅತೀವ ಸಂತೋಷ ತಂದಿದೆ ಎಂದರು.
ಮುಚ್ಚುವ ಶಾಲೆಗಳ ಉಳಿಸಿದ ಶಾಸಕರು : ಚನಿಲ ತಿಮ್ಮಪ್ಪ ಶೆಟ್ಟಿ
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಶಿಕ್ಷಣ ಇಲಾಖೆ ಎಂದರೆ ದೇಶದ ವಿದ್ಯಾರ್ಥಿಗಳಿಗೆ ಸುಸಂಸ್ಕೃತ ವಿದ್ಯಾಭ್ಯಾಸ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿಯುತ ಇಲಾಖೆ. ಪುತ್ತೂರಿನಲ್ಲಿ ಶಿಕ್ಷಣಾಧಿಕಾರಿ ಕಚೇರಿ ಜೊತೆಗೆ ಮುಚ್ಚುವ ಹಂತದಲ್ಲಿದ್ದ ಸರಕಾರಿ ಶಾಲೆಗಳನ್ನು ಅದರಲ್ಲೂ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಆಗಿದೆ. ಎರಡು ಪಬ್ಲಿಕ್ ಶಾಲೆಗಳನ್ನು ತೆರೆಯುವ ಕೆಲಸವೂ ಆಗಿದೆ ಎಂದರು.
ಶಾಲೆಗಳ ಪ್ರೀತಿ ಗಳಿಸಿದ ಶಾಸಕ ಸಂಜೀವ ಮಠಂದೂರು: ವಿಮಲ್ ನೆಲ್ಯಾಡಿ
ಕಡಬ ಸರಕಾರಿ ನೌಕರರ ಸಂಘದ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನೆಲ್ಯಾಡಿ ಹಿ.ಪ್ರಾ. ಶಾಲಾ ಶಿಕ್ಷಕ ವಿಮಲ್ ನೆಲ್ಯಾಡಿ ಮಾತನಾಡಿ, ಅತ್ಯಂತ ಪ್ರೀತಿಯಿಟ್ಟು, ಪ್ರಾಮಾಣಿಕವಾಗಿ ಸರಕಾರಿ ಶಾಲೆಗಳ ಉಳಿವಿಗಾಗಿ ದುಡಿದವರು ಶಾಸಕರು. ಪ್ರತಿ ಶಾಲೆಗಳಿಗೆ ತೆರಳಿ, ಅಲ್ಲಿನ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ತಾಲೂಕಿನ ಎಲ್ಲಾ ಶಾಲೆಗಳಿಗೆ ಅದ್ಭುತ ಕೊಡುಗೆಗಳನ್ನು ನೀಡುವ ಮೂಲಕ ನೈಜ ಕಾಳಜಿ ತೋರಿಸಿದ್ದಾರೆ. ಪುತ್ತೂರಿನ ಎಲ್ಲಾ ಶಾಲೆಗಳನ್ನು ಗುರುತಿಸಿ ಎತ್ತರಕ್ಕೆ ಏರಿಸಿದ್ದಾರೆ. ಆದ್ದರಿಂದ ಅಷ್ಟೂ ಶಾಲೆಗಳ ಪ್ರೀತಿಯನ್ನು ಗಳಿಸಿದ್ದಾರೆ. ಓರ್ವ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದವರು ಶಾಸಕ ಸಂಜೀವ ಮಠಂದೂರು. ಆದ್ದರಿಂದ ಅವರು ಶಾಲೆಯ ಬೇಡಿಕೆಗಳನ್ನು ಅತೀ ಬೇಗ ಗ್ರಹಿಸಿ, ಅದಕ್ಕೆ ಸ್ಪಂದನೆ ನೀಡುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹೀಗೆ ಇರಬೇಕು ಎನ್ನುವ ಕಲ್ಪನೆಯನ್ನು ಮುಂದಿಟ್ಟವರು ಕ್ಷೇತ್ರ ಶಿಕ್ಷಣಾಧಿಕಾರಿಗಳು. ಅದನ್ನು ಕಾರ್ಯರೂಪಕ್ಕೆ ತಂದವರು ಶಾಸಕ ಸಂಜೀವ ಮಠಂದೂರು ಅವರು. ಕಟ್ಟಡದ ಬಗ್ಗೆ ಆಸ್ಥೆ ವಹಿಸಿ, ಪ್ರತಿಯೊಂದು ಕೆಲಸಗಳ ಬಗ್ಗೆಯೂ ಕಾಳಜಿ ತೋರಿಸಿದ್ದಾರೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಟ್ಟಡ. ಆದಷ್ಟು ಶೀಘ್ರ ನಿರ್ಮಾಣಗೊಂಡು ಅದನ್ನು ಉದ್ಘಾಟನೆ ಮಾಡುವ ಭಾಗ್ಯವೂ ಸಂಜೀವ ಮಠಂದೂರು ಅವರಿಗೇ ಸಿಗುವಂತಾಗಲಿ ಎಂದು ಹಾರೈಸಿದರು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುಡಾ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ನವೀನ್ ಸ್ಟೀಪನ್ ವೇಗಸ್, ಮೋನಪ್ಪ, ರಾಮಕೃಷ್ಣ ಮಲ್ಲಾರ್, ತಾರನಾಥ ಸವಣೂರು, ಸಹಾಯಕ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಅಬ್ರಹಾಂ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು.