ಪುತ್ತೂರು: ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಐಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರವನ್ನು ಪ್ರೇರಣಾ ಸಂಸ್ಥೆ ಹಮ್ಮಿಕೊಂಡಿದೆ.
ಪುತ್ತೂರು ಸಹಿತ ಆಸುಪಾಸಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರದ ಪ್ರತಿಷ್ಠಿತ ಸರಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಉದ್ದೇಶದಿಂದ ಪ್ರೇರಣಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಐಎಎಸ್, ಐಪಿಎಸ್ ಪರೀಕ್ಷೆಗೆ ಪುತ್ತೂರಿನ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಹಿನ್ನೆಲೆಯಲ್ಲಿ ಇದೊಂದು ವಿನೂತನ ಪ್ರಯತ್ನ.
ರಾಷ್ಟ್ರದ ಪ್ರತಿಷ್ಠಿತ ಐಎಎಸ್ ತರಬೇತಿ ಸಂಸ್ಥೆಯೊಂದಿಗೆ ಪ್ರೇರಣಾ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದ್ದು, ಪುತ್ತೂರಿನ ಪ್ರೇರಣಾ ಸಂಸ್ಥೆಯಲ್ಲಿ ಮುಂದಿನ ತಿಂಗಳಿನಿಂದ ಐಎಎಸ್, ಐಪಿಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯಲಿದೆ.
ಮೊದಲ ಬ್ಯಾಚಿನಲ್ಲಿ 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಕೆಲವೇ ಸೀಟು ಮಾತ್ರ ಲಭ್ಯವಿದೆ. ಪದವಿ, ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳು, ಉದ್ಯೋಗಸ್ಥರು ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರೇರಣಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.