ಪುತ್ತೂರು: ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆಂದು ತಮ್ಮ ಬಗ್ಗೆ ಸುಳ್ಳು ಸುದ್ದಿ ನೀಡಿದ್ದು, ತಾವು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತರು ಎಂದು ಬಿಜೆಪಿ ಕಾರ್ಯಕರ್ತ ಚಂದ್ರ ಬೋಸ್ ವೀಡಿಯೋ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂಬಂತೆ ಬಿಂಬಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಚಂದ್ರಬೋಸ್ ಹಾಗೂ ಅವರ ಸಂಗಡಿಗರು ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಆ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಆರೋಪಿಸಿದ್ದಾರೆ. ಚಂದ್ರ ಬೋಸ್ ಹಾಗೂ ಸಂಗಡಿಗರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದ ಪೂರ್ಣ ವಿವರ ಇಲ್ಲಿದೆ.
“ದಿನಾಂಕ 04-03-2023ರಂದು ದೇವಸ್ಥಾನದ ದೇಣಿಗೆಗಾಗಿ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಹೋಗಿದ್ದೇವು. ಮಾತುಕತೆಯ ಬಳಿಕ ದೇಣಿಗೆ ನೀಡಲು ಒಪ್ಪಿಕೊಂಡಿದ್ದು, ನಂತರ ಏಕಾಏಕಿ ಕಾಂಗ್ರೆಸ್ ಪಕ್ಷದ ಶಾಲನ್ನು ತಮಗೆ ಹಾಕಿದ್ದರು. ಇದರ ವರದಿಯನ್ನು ಪತ್ರಿಕೆಗೆ ನೀಡಿ, ಪ್ರಕಟ ಪಡಿಸಿರುತ್ತಾರೆ. ಆದರೆ ನಾವು ದೇಣಿಗೆ ಕೇಳಲು ಹೋದದ್ದೇ ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ನಾವು ಈ ಹಿಂದೆ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇನ್ನು ಮುಂದೆಯೂ ಬಿಜೆಪಿ ಪಕ್ಷದಲ್ಲೇ ಕೆಲಸ ಮಾಡುತ್ತೇವೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.
ಪ್ರಕಟವಾದ ವರದಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಎಂಬಂತೆ ಬಿಂಬಿಸಲಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ಚಂದ್ರ ಬೋಸ್ ಹಾಗೂ ಸಂಗಡಿಗರಾದ ಕಾಮರಾಜ್, ಶಿವಕುಮಾರ್, ವಿನೋದ್ ಕುಮಾರ್, ಧನಂಜಯ ಕುಮಾರ್ ವೀಡಿಯೋ ಹೇಳಿಕೆ ನೀಡಿ, ಸ್ಪಷ್ಟಪಡಿಸಿದ್ದಾರೆ.