ಪುತ್ತೂರು: ಯಂಗ್ ಬ್ರಿಗೇಡ್ ಸೇವಾದಳದ ವತಿಯಿಂದ ರಕ್ತದಾನ ಶಿಬಿರ ಈಗಾಗಲೇ ಆರಂಭಗೊಂಡಿದ್ದು, ಮಾ.10 ರಿಂದ 12 ರವರೆಗೆ ಗ್ರಾಮ ಗ್ರಾಮಗಳ 32 ತಂಡಗಳ ರಾಜೀವ್ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಕ್ರಿಕೆಟ್ ಪಂದ್ಯಾಟ 6 ಯುನಿಟ್ ರಕ್ತದಾನ ಮಾಡುವ ಮೂಲಕ ಪ್ರವೇಶ ಶುಲ್ಕವಿಲ್ಲದೆ ನಡೆಯಲಿದೆ. ಮಾ.10 ರಂದು 3 ಗಂಟೆಗೆ ಬೂತ್ ಮಟ್ಟದ ಕಾರ್ಯಕರ್ತರ ಅಟೋರಿಕ್ಷಾ ರ್ಯಾಲಿ ನಡೆಯಲಿದೆ ಎಂದು ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರೀಯಾಜ್ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಟೋರಿಕ್ಷಾ ರ್ಯಾಲಿಯ ಉದ್ಘಾಟನೆ ಧರ್ಬೆ ವೃತ್ತದಲ್ಲಿ ನಡೆಯಲಿದ್ದು, ಮುಖ್ಯ ರಸ್ತೆಯ ಮೂಲಕ ಕಿಲ್ಲೆ ಮೈದಾನಕ್ಕೆ ಆಗಮಿಸಲಿದೆ. ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಲಿದ್ದೇವೆ. ಸುಮಾರು 150 ರಿಕ್ಷಾ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದು, ಎಲ್ಲರಿಗೆ ಗೌರವಾರ್ಪಣೆ ನಡೆಯಲಿದೆ. ಭಾಗವಹಿಸಿದ ರಿಕ್ಷಾ ಚಾಲಕರಿಗೆ ಲಕ್ಕೀ ಕೂಪನ್ ಮೂಲಕ ಬಹುಮಾನ ನೀಡುವ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಭಾಗವಹಿಸಲಿದ್ದಾರೆ. ಮಾ.೧2 ರಂದು ಕ್ರಿಕೆಟ್ ಸಮಾರೋಪ ಸಮಾರಂಭ ನಡೆಯಲಿದ್ದು, ಭಾಗವಹಿಸಿದ ಸ್ತ್ರೀಶಕ್ತಿಗೆ ಲಕ್ಕಿ ಕೂಪನ್ ಮೂಲಕ ಬಹುಮಾನ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಅಧ್ಯಕ್ಷ ರಂಜಿತ್ ಬಂಗೇರ ಮಾತನಾಡಿ, ಪ್ರತಿ ತಂಡದಿಂದ 6 ಯುನಿಟ್ ನಂತೆ ಒಟ್ಟು 32 ತಂಡದಿಂದ 250 ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹ ಆಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಸಾರ್ವಜನಿಕ ರಕ್ತದಾನ ಕಾರ್ಯಕ್ರಮ ವಾಗಿರುವ ಕಾರಣ ಹೊರಗಿನಿಂದಲೂ ಜನರು ಆಗಮಿಸುತ್ತಿದ್ದಾರೆ. ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 50 ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 30 ಸಾವಿರ ನಗದು ಟ್ರೋಫಿ ನೀಡಲಾಗುವುದು. ಕ್ರೀಡಾಪಟುಗಳು ಕಾಂಗ್ರೆಸ್ ಪಕ್ಷದ ಚಿಹ್ನೆಯ ಜರ್ಸಿ ಧರಿಸಿ ಆಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸನತ್ ರೈ, ಕೋಶಾಧಿಕಾರಿ ಶರೀಫ್ ಬಲ್ನಾಡು, ಸದಸ್ಯ ಎಡ್ವರ್ಡ್ ಉಪಸ್ಥಿತರಿದ್ದರು.