ಉಡುಪಿ : ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮತ್ತು ಶ್ರೀ ಅನಂತೇಶ್ವರ ದೇಗುಲಕ್ಕೆ ಅರಸ ರಾಮಭೋಜ ಎನ್ನುವವರು ಜಾಗ ನೀಡಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಶಾಸನಗಳು ಇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.
ಆಧಾರ ರಹಿತವಾದ ಹೇಳಿಕೆ ನೀಡುವವರ ಮಾತಿನ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಉಡುಪಿಯ ಕೃಷ್ಣ ಮಠ, ಅನಂತೇಶ್ವರ ಸನ್ನಿಧಿಗೆ ರಾಮಭೋಜ ಎಂಬ ಅರಸ ಹಾಗೂ ಕುಂಜಿತ್ತಾಯ ಮನೆತನದವರು ಜಮೀನು ನೀಡಿದ್ದಾರೆ ಎನ್ನುವುದಕ್ಕೆ ದಾಖಲೆಗಳು ಮತ್ತು ಶಿಲಾಶಾಸನಗಳು ಇವೆ ಎಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕ ಮಿಥುನ್ ರೈ ಕೃಷ್ಣ ಮಠಕ್ಕೆ ಜಾಗ ಕೊಟ್ಟವರು ಮುಸ್ಲಿಮರು ಎಂಬ ಆಧಾರ ರಹಿತವಾದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಇದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ಉಡುಪಿಯ ಶಾಸಕ ರಘುಪತಿ ಭಟ್ ಮುಸ್ಲಿಂ ಅರಸರು ಕೃಷ್ಣ ಮಠಕ್ಕೆ ಜಾಗ ಕೊಟ್ಟಿಲ್ಲ, ಮಧ್ವ ಸರೋವರದಲ್ಲಿರುವ ಶಾಸನದಲ್ಲಿ ಜಾಗ ಯಾರು ಕೊಟ್ಟಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ ಶಾಸನಗಳಿವೆ. ಹಾಜಿ ಅಬ್ದುಲ್ಲ ಸಾಹೇಬರು ಶ್ರೀ ಕೃಷ್ಣನ ಭಕ್ತರಾಗಿದ್ದರು ಮತ್ತು ಈ ನೆಲೆಯಲ್ಲಿ ಮಠಕ್ಕೆ ಸಹಾಯ ಮಾಡಿರುವುದು ನಿಜ. ಆದರೆ ಕೆಲವರು ಸೌಹಾರ್ದತೆಯ ಹೆಸರಿನಲ್ಲಿ ಇತಿಹಾಸವನ್ನೇ ತಿರುಚುತ್ತಿದ್ದಾರೆ ಎಂದು ಹೇಳಿದ್ದಾರೆ.