ಮಂಗಳೂರು : ಬಂಟ್ವಾಳದ ನಂದವಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಸೆರೆ ಹಿಡಿದಿರುವ ಮೂವರು ಬಿಹಾರದ ಉಗ್ರರಿಗಾಗಿ ಸುಮಾರು 25 ಕೋ. ರೂ. ರವಾನಿಸಿರುವ ಲೆಕ್ಕ ಸಿಕ್ಕಿದೆ. ನಂದಾವರ, ಪುತ್ತೂರು ಮತ್ತು ಕೇರಳದ ಮಂಜೇಶ್ವರದಿಂದ ಎನ್‌ಐಎ ಐವರನ್ನು ಬಂಧಿಸಿದ್ದು, ಇವರೆಲ್ಲ ನಿಷೇಧಿತ ಪಿಎಫ್‌ಐ ಕಾರ್ಯಕರ್ತರಾಗಿದ್ದರು.
ವಿಧ್ವಂಸಕ ಕೃತ್ಯ ಎಸಗಿರುವ ಸಂಚಿನಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪ ಅವರ ಮೇಲಿದೆ. ಕರಾವಳಿಯಿಂದ ಬರೀ ಒಂದು ಕೃತ್ಯಕ್ಕೆ ಸುಮಾರು 25 ಕೋ. ರೂ. ರವಾನೆಯಾಗಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ.
ಕರಾವಳಿಯಲ್ಲಿ ಉಗ್ರರಿಗೆ ಹಣಕಾಸಿನ ನೆರವು ಒದಗಿಸುವ ವ್ಯವಸ್ಥಿತ ಹವಾಲ ಜಾಲವೊಂದು ಸಕ್ರಿಯವಾಗಿದ್ದು, ಬಂಧಿತ ಐವರು ಈ ಜಾಲದಲ್ಲಿದ್ದವರು. ಹವಾಲ ಮೂಲಕ ಕೋಟ್ಯಂತರ ರೂಪಾಯಿ ಉಗ್ರರಿಗೆ ಸಂದಾಯವಾಗಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ಎನ್‌ಐಎ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಂದಿ ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಹಾರದ ಪಟ್ನಾದ ಪುಲ್ಲಾರಿ ಷರೀಫ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿ ಬಂಟ್ವಾಳದ ನಂದಾವರ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾ. 5ರಂದು ಬಂಧಿಸಿರುವ ಐವರು ಭಯೋತ್ಪಾದಕರಿಗೆ 25 ಕೋ.ರೂ. ನೇರವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.ದ.ಕ. ಹಾಗೂ ಕಾಸರಗೋಡಿನ ಪಿಎಫ್‌ಐ ಕಾರ್ಯಕರ್ತರು ಪಿಎಫ್‌ಐಯ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಕುರಿತು ಎನ್‌ಐಎಗೆ ದಾಖಲೆಗಳು ಸಿಕ್ಕಿವೆ.
ವಿದೇಶದಿಂದ ಬರುತ್ತಿದ್ದ ದೊಡ್ಡ ಮೊತ್ತದ ಹಣವನ್ನು ಉಗ್ರರ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುವ ಕೆಲಸವನ್ನು ಸೆರೆಯಾದ ಐವರು ಮಾಡುತ್ತಿದ್ದರು. ಹವಾಲ ಮೂಲಕ ಬಂದ ಹಣವನ್ನು ಕಂತಿನಲ್ಲಿ ಬ್ಯಾಂಕ್ ಖಾತೆಗಳಿಗೆ ಹಾಕಿ ಉಗ್ರರಿಗೆ ತಲುಪಿಸುತ್ತಿದ್ದರು. ಇದಕ್ಕಾಗಿ ಉಗ್ರರು ಹತ್ತಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಈ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳ ಕುರಿತು ಕೂಡ ಎನ್‌ಐಎ ತನಿಖೆ ನಡೆಸುತ್ತಿದೆ.
ಬಿಹಾರದ ಫುಲ್ವಾರಿ ಷರೀಫ್‌ನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದ ಕೆಲವು ಉಗ್ರರನ್ನು ಎನ್‌ಐಎ ಇತ್ತೀಚೆಗೆ ಬಂಧಿಸಿತ್ತು. ಅವರ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕದ ಕರಾವಳಿ ಭಾಗದಿಂದ ಅವರಿಗೆ ಹಣ ಹೋಗಿರುವ ಮಾಹಿತಿ ಸಿಕ್ಕಿದೆ. ಹಿಂದು ಯುವಕರನ್ನು ಸಾಯಿಸುವ ತರಬೇತಿ ಪಡೆದುಕೊಂಡಿದ್ದ ಅವರು ಇದಕ್ಕಾಗಿ ಸಮಯ ಕಾಯುತ್ತಿದ್ದರು. ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಸಿ ಜನರನ್ನು ಸಾಯಿಸುವ ತರಬೇತಿ ಅವರಿಗೆ ನೀಡಲಾಗಿತ್ತು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾ.5ರಂದು ಬಂಧಿಸಿದ ಎಲ್ಲ ಐವರನ್ನು ಎನ್‌ಐಎ ಬಿಹಾರಕ್ಕೆ ಕರೆದೊಯ್ದಿದೆ.