ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನಿರ್ದೇಶನದಂತೆ ಮಾ.11ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಉಪ್ಪಿನಂಗಡಿಯಲ್ಲಿ ಪ್ರಾರಂಭವಾಗಿ, ಮಧ್ಯಾಹ್ನ `12 ಗಂಟೆಗೆ ವಿಟ್ಲದಲ್ಲಿ, 3 ಗಂಟೆಗೆ ಕುಂಬ್ರದಲ್ಲಿ, ಸಾಯಂಕಾಲ 5 ಗಂಟೆಗೆ ಪುತ್ತೂರಿನ ಕಿಲ್ಲೆಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ನಾಯಕರಾದ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್, ಶಾಸಕರಾದ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಜಿಲ್ಲೆಯ ಪ್ರಮು ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿ ಪಕ್ಷದ ಬ್ರಷ್ಠಾಚಾರ, ಕಮಿಷನ್ ದಂಧೆ, ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಈ ಮೂಲಕ ಮಾಡಲಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದ ಎಪಿಎಲ್ ಹಾಗೂ ಬಿಪಿಎಲ್ ಸೇರಿ ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಯಜಮಾನಿ ಮಹಿಳೆಗೆ 2 ಸಾವಿರ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬಿಪಿಎಲ್ ನವರಿಗೆ 10 ಕೆ.ಜಿ. ಅಕ್ಕಿ ನೀಡುವ ಕಾರ್ಯವನ್ನು ಈಗಾಗಲೇ ಘೋಷಿಸಲಾಗಿದ್ದು, ಪ್ರತಿ ಮನೆಗೆ ಭರವಸೆಯ ಗ್ಯಾರೆಂಟಿ ಕಾರ್ಡ್ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜನರ ಮನಸ್ಸನ್ನು ಸೂರೆಗೊಳ್ಳುವ, ಹೃದಯವನ್ನು ಸ್ಪರ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಪುತ್ತೂರು ನಗರ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ನಾಲ್ಕು ಕಾರ್ಯಕ್ರಮದಲ್ಲಿ ಎರಡು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಹಾಗೂ ಎರಡು ಪುತ್ತೂರು ಬ್ಲಾಕ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಹಿಳೆಗೆ ನೀಡುವ 2ಸಾವಿರದಲ್ಲಿ 500 ರೂ. ಗ್ಯಾಸ್ ಸಬ್ಸಿಡಿ ಪರಿಹಾರ, 500 ರೂ. ಎಲ್ಲಾ ದಿನಬಳಕೆ ಆಹಾರಗಳಿಗೆ ಹೆಚ್ಚಾದ ತೆರಿಗೆ ಪರಿಹಾರ, 1 ಸಾವಿರ ರೂ. ಬೆಲೆ ಏರಿಕೆಯ ಪರಿಹಾರವಾಗಿ ನೀಡಲಾಗುತ್ತದೆ. ಬಂಟ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ಕಾರ್ಯಕರ್ತರು ಮನೆ ಮನೆ ಬೇಟಿಯ ಕಾರ್ಯವನ್ನು ಮಾಡುತ್ತಿದ್ದು, ಕರಾವಳಿಗೆ ಪ್ರತ್ಯೇಕ ಪ್ರನಾಳಿಕೆಯನ್ನು ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಶಕ್ಕೂರ್ ಹಾಜಿ, ಬ್ಲಾಕ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ದಿವ್ಯ ಪ್ರಭಾ ಚಿಲ್ತಡ್ಕ ಉಪಸ್ಥಿತರಿದ್ದರು.