ಎನ್ ಎಸ್ ಎಸ್ ಬದುಕುವ ಶಿಕ್ಷಣವನ್ನು ನೀಡುತ್ತದೆ : ಸಂಜೀವ ಮಠಂದೂರು | ಬೆಟ್ಟಂಪಾಡಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ

ಪುತ್ತೂರು: ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣವನ್ನು ಎನ್ಎಸ್ಎಸ್ ನೀಡುವುದರ ಜತೆಗೆ ಉತ್ತಮ ನಾಯಕರನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಶಿಬಿರದ ಪ್ರಯೋಜನವನ್ನು ಪಡೆಯಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ನಿಡ್ಪಳ್ಳಿ ಗ್ರಾಮದ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಬಿರಾಧಿಕಾರಿ ಹರಿಪ್ರಸಾದ್ ಎಸ್, ಪ್ರಾಸ್ತಾವಿಕವಾಗಿ ಮಾತನಾಡಿ, ಎನ್ಎಸ್ಎಸ್ ಶಿಬಿರ ಕಾಲೇಜು- ಶಾಲೆ-ಸಮಾಜದ ನಡುವಿನ ಸಂಬಂಧ ವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶವನ್ನು ಒಳಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಹೊಸ ಶಿಕ್ಷಣಪದ್ಧತಿಯಲ್ಲಿ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದ ಎಂದರು..































 
 

ಮುಖ್ಯ ಅತಿಥಿಯಾಗಿ ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಶಾಲೆಯ ಒಳಾಂಗಣ ಶಿಕ್ಷಣವು ವೃತ್ತಿ ಜೀವನಕ್ಕೆ ಸಹಕಾರಿಯಾದರೂ ಬದುಕನ್ನು ನಡೆಸುವ ಕಲೆ ಎನ್ಎಸ್ಎಸ್ ಪರಿಚಯಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ ಧನಾತ್ಮಕ ಚಿಂತನೆಗಳನ್ನು ತರುವಲ್ಲಿ ಎನ್ಎಸ್ಎಸ್ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ನಿಡ್ಪಳ್ಳಿ ಗ್ರಾಪಂ ಉಪಾಧ್ಯಕ್ಷ ವೆಂಕಟರಮಣ ಬೋರ್ಕರ್ ಮಾತನಾಡಿ,  ಮನಸ್ಸಿನ ಅಂಧಕಾರವನ್ನು ಕಳೆದು ಜೀವನದಲ್ಲಿ ಬೆಳಕನ್ನು ಮೂಡಿಸುವಂತಹ ಪವಿತ್ರ ಕಾರ್ಯದಲ್ಲಿ ಎನ್ಎಸ್ಎಸ್ ತೊಡಗಿದೆ. ಇಂತಹ ಶಿಬಿರಗಳು ಹಿಂದುಳಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿ, ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಪೀಳಿಗೆಯು ಮೊಬೈಲಿಗೆ ಬಲಿಯಾಗುತ್ತಿರುವ ಘಟನೆಗಳನ್ನು ಉಲ್ಲೇಖಿಸುತ್ತಾ  ಶಿಬಿರವು ವಿದ್ಯಾರ್ಥಿಗಳಲ್ಲಿ ಮೊಬೈಲ್ ರಹಿತ ಜೀವನವನ್ನು ಕಲಿಸುತ್ತದೆ. ನಮ್ಮ ಕಾಲೇಜಿನ ಈ ವರ್ಷದ ಎನ್ ಎಸ್ ಎಸ್ ಶಿಬಿರದ ಧ್ಯೇಯವಾಕ್ಯವಾಗಿರುವ ‘ಸಾಮಾಜಿಕ ಜಾಲತಾಣಗಳ ಸದ್ಬಳಕೆಯತ್ತ ನಮ್ಮ ಚಿತ್ತ’ ಯುವಜನತೆಯನ್ನು ಇನ್ನಷ್ಟು ಶಿಕ್ಷಿತರನ್ನಾಗಿಸಲಿ ಎಂದು ಹಾರೈಸಿದರು.

ಮುಖ್ಯ ಶಿಕ್ಷಕಿ ಆಶಾ ಎಸ್. ಶುಭ ಹಾರೈಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಕರುಣಾಲಕ್ಷ್ಮಿ, ಪ್ರೊ. ಉದಯರಾಜ್, ಡಾ.ಪೊಡಿಯ, ಮಮತಾ, ಶಿಬಿರಾಧಿಕಾರಿ ಪ್ರೊ.ಶಶಿಕುಮಾರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಕರ್ಕೇರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಭಟ್, ಉಪಸ್ಥಿತರಿದ್ದರು. ಶಿಬಿರಾರ್ಥಿ ಆದರ್ಶ ಬಿ ಸ್ವಾಗತಿಸಿದರು. ಶ್ರಾವ್ಯ ಕೆ ಎಸ್ ವಂದಸಿದರು. ನಯನ ಬಿ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top