ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ

ರಷ್ಯಾದಲ್ಲಿ ಪ್ರತಿಯೊಬ್ಬರೂ ರಷ್ಯನ್ ಭಾಷೆ ಮಾತಾಡುತ್ತಾರೆ. ಜಪಾನ್‌ನಲ್ಲಿ ಪ್ರತಿಯೊಬ್ಬರಿಗೂ ಜಪಾನಿ ಭಾಷೆ ಗೊತ್ತಿದೆ. ಚೀನಾದಲ್ಲಿ ಪ್ರತಿಯೊಬ್ಬರಿಗೂ ಚೀನಿ ಭಾಷೆಯ ಪರಿಚಯ ಇದೆ. ಸ್ಪೇನ್‌ನಲ್ಲಿ ಪ್ರತಿಯೊಬ್ಬರೂ ಸ್ಪಾನಿಷ್ ಭಾಷೆಯನ್ನು ಪ್ರೀತಿಯಿಂದ ಕಲಿತು ಮಾತಾಡುತ್ತಾರೆ.
ಭಾರತದಲ್ಲಿ ರಾಷ್ಟ್ರಭಾಷೆ ಯಾವುದು ಎಂದು ಕೇಳಿದರೆ ಹೆಚ್ಚಿನವರು ಹಿಂದಿ ಎಂದು ಹೇಳುತ್ತಾರೆ. ಆದರೆ ಅದು ಖಂಡಿತ ಸತ್ಯ ಅಲ್ಲ. ನಮ್ಮ ಸಂವಿಧಾನದಲ್ಲಿ ಅದರ ಉಲ್ಲೇಖ ಇಲ್ಲ. ರಾಷ್ಟ್ರ ಭಾಷೆಯಾಗಿ ಒಂದು ಭಾಷೆಯನ್ನು ಬೆಳೆಸಬೇಕು ಎಂಬ ಆಸೆ ಅಂಬೇಡ್ಕರ್ ಅವರಿಗೆ ಇದ್ದಿದ್ದರೂ ಅದನ್ನು ಅವರು ನಮ್ಮ ಸಂವಿಧಾನದಲ್ಲಿ ಪ್ರತಿಫಲನ ಮಾಡಿಲ್ಲ. ಅದಕ್ಕೆ ಅದರದ್ದೇ ಆದ ಕೆಲವು ಕಾರಣಗಳು ಇದ್ದವು. ಭಾರತವು ವಿಶಾಲವಾದ ಜನಸಂಖ್ಯೆಯ ರಾಷ್ಟ್ರ ಎಂಬುದೂ ಒಂದು ಕಾರಣ (ಆದರೆ ನಮಗಿಂತ ವಿಸ್ತಾರ ಜನಸಂಖ್ಯೆ ಇರುವ ಚೀನಾದಲ್ಲಿ ಚೈನೀಸ್ ಭಾಷೆ ರಾಷ್ಟ್ರಭಾಷೆ ಆಗಿದೆ). ಎರಡನೆಯ ಕಾರಣ ಭಾರತದಲ್ಲಿ ಅತಿ ಹೆಚ್ಚು ಭಾಷೆಗಳು ಇವೆ ಎನ್ನುವುದು. ಅದು ಭಾರತದ ಶ್ರೇಷ್ಠತೆ.

ರಾಷ್ಟ್ರಭಾಷೆಯ ಅಗತ್ಯ ಯಾಕೆ?
ಸರ್ದಾರ್ ಪಟೇಲರು ಭಾರತವನ್ನು ಕಟ್ಟುವಾಗ ಪ್ರಾದೇಶಿಕ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಕಟ್ಟಿದರು. ಅವರಿಗೆ ಆಗ ಇದ್ದ ಒಂದೇ ಒಂದು ಆಯ್ಕೆ ಅಂದರೆ ಅದು ಭಾಷೆ ಮಾತ್ರ. ಅದರಿಂದಾಗಿ ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಿದರು. ಇದರಿಂದಾಗಿ ಪ್ರಾದೇಶಿಕ ಭಾಷೆಗಳು ಬೆಳೆಯಬೇಕು ಎಂದು ಅವರ ಬಹುದೊಡ್ಡ ಕನಸು ಕೂಡ ಇತ್ತು.
ಆದರೆ ಸಂವಹನ ಭಾಷೆಯಾಗಿ ಒಂದು ಸಾಮಾನ್ಯ ಭಾಷೆ ಭಾರತಕ್ಕೆ ಬೇಕು. ಇಡೀ ಭಾರತದ 130 ಕೋಟಿ ಪ್ರಜೆಗಳು ಒಂದು ಭಾಷೆಯನ್ನು ಅರ್ಥ ಮಾಡಿಕೊಂಡು ಮಾತಾಡುವ ಒಂದು ಭಾಷೆ ಬೇಕು ಎನ್ನುವುದು ನನ್ನ ಅಭಿಪ್ರಾಯ. ಅದು ರಾಷ್ಟ್ರೀಯ ಭಾವೈಕ್ಯತೆಯನ್ನು ಕೂಡ ಪೋಷಣೆ ಮಾಡುತ್ತದೆ. ವ್ಯಾವಹಾರಿಕವಾಗಿ ನಾವು ಕರ್ನಾಟಕದ ಹೊರಗೆ ಹೋದಾಗ ಅಲ್ಲಿನ ಭಾಷೆಯನ್ನು ಹೊಸದಾಗಿ ಕಲಿಯುವ ಅನಿವಾರ್ಯತೆ ಉಂಟಾಗುತ್ತದೆ.
ಉದಾಹರಣೆಗೆ ನೀವು ತಮಿಳುನಾಡಿಗೆ ಹೋದರೆ ಒಂದೆರಡು ತಿಂಗಳ ಒಳಗೆ ನೀವು ತಮಿಳು ಕಲಿಯಲೇಬೇಕು. ಇಲ್ಲಾಂದ್ರೆ ನಿಮಗೆ ಉಸಿರು ಕಟ್ಟಲು ಆರಂಭ ಆಗುತ್ತದೆ. ಯಾವುದೇ ಭಾಷೆಯನ್ನು ವ್ಯಾವಹಾರಿಕವಾಗಿ ಕಲಿಯುವುದು ತುಂಬಾ ಕಷ್ಟ ಅಲ್ಲ. ಆದರೆ ಇಡೀ ಭಾರತವು ಸಂವಹನ ಮಾಡುವ ಒಂದು ವ್ಯಾವಹಾರಿಕ ಭಾಷೆಯ ಅಗತ್ಯ ಇದೆ. ಅದನ್ನು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಬೆಳೆಸುವುದು ಅಗತ್ಯ ಇಲ್ಲ. ಆದರೆ ವ್ಯಾವಹಾರಿಕವಾಗಿ ಆದರೂ ಒಂದು ಸಾಮಾನ್ಯ ಭಾಷೆ ಭಾರತಕ್ಕೆ ಬೇಕು. ಅದಕ್ಕಾಗಿ ಶಾಲಾ ಹಂತಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಕೆ ಮಾಡಿಕೊಂಡು ಮೂರನೇ ಭಾಷೆಯನ್ನು ಕಲಿಯುವ ವ್ಯವಸ್ಥೆಯನ್ನು ಮಾಡಲಾಯಿತು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ
ಅದರ ಬಗ್ಗೆ ಎರಡನೇ ಮಾತೇ ಇಲ್ಲ. ಕನ್ನಡ ನಮ್ಮ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ನಮ್ಮ ನೆಲದ ಭಾಷೆ. ಅದು ಆಡಳಿತ ಭಾಷೆ ಕೂಡ ಆಗಿರುವ ಕಾರಣ ಅನ್ನದ ಭಾಷೆ ಕೂಡ ಹೌದು. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸಲು ಮೂವತ್ತಕ್ಕೂ ಹೆಚ್ಚು ಸರಕಾರಿ ಸಂಸ್ಥೆಗಳು, ಅಕಾಡೆಮಿಗಳು ಇವೆ. ಕರ್ನಾಟಕದ ಪ್ರತಿಯೊಬ್ಬರೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಅನ್ನುವುದು ಆಶಯ. ಆದರೆ ಅದರ ಜತೆಗೆ ಬೇರೆ ಭಾಷೆಗಳನ್ನು ಕಲಿಯಲೇಬಾರದು ಅನ್ನುವುದನ್ನು ಯಾರೂ ಒಪ್ಪುವುದಿಲ್ಲ.































 
 

ಮೂರು ಭಾಷೆಗಳಿಗೆ ಸಂವಹನ ಭಾಷೆ ಆಗುವ ಅರ್ಹತೆ
ಅವೆಂದರೆ ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್. ಪ್ರತಿಯೊಂದು ಭಾಷೆಯೂ ಭಾರತದಲ್ಲಿ ವಿಸ್ತಾರವಾಗಿ ಬೆಳೆದಿದೆ. ಅವುಗಳಲ್ಲಿ ಒಂದನ್ನು ಭಾರತದಲ್ಲಿ ಸಂವಹನ ಭಾಷೆಯಾಗಿ (ನಾನು ಒತ್ತಿ ಹೇಳುತ್ತಿದ್ದೇನೆ-ಸಂವಹನ ಭಾಷೆಯಾಗಿ) ಬೆಳೆಸುವ ಅಗತ್ಯ ಇದೆ.

ಸಂಸ್ಕೃತ ಯಾಕೆ?
ಸಂಸ್ಕೃತವನ್ನು ಗೀರ್ವಾಣ ಭಾರತಿ ಎಂದು ನಮ್ಮ ಹಿರಿಯರು ಹೇಳಿದರು. ಅದು ದೇವತೆಗಳು ಮಾತಾಡುವ ಭಾಷೆ ಎನ್ನುವುದು ನಂಬಿಕೆ. ಅದು ಪುರೋಹಿತರ ಭಾಷೆ, ಬ್ರಾಹ್ಮಣರ ಭಾಷೆ, ಮೃತ ಭಾಷೆ ಎನ್ನುವುದು ಕೇವಲ ಅಪಪ್ರಚಾರ. ಕಂಪ್ಯೂಟರ್ ಸಾಫ್ಟವೇರ್‌ಗೆ ಸುಲಭದಲ್ಲಿ ಹೊಂದಿಕೊಳ್ಳುವ ಭಾಷೆ ಎಂದರೆ ಅದು ಸಂಸ್ಕೃತ ಎಂದು ಅಮೆರಿಕದ ಫೋರ್ಬ್ಸ್ ಪತ್ರಿಕೆ ವರದಿ ಮಾಡಿದೆ. ಸಂಸ್ಕೃತ ಸಂವಹನಕ್ಕೂ ಸುಲಭ ಭಾಷೆ ಎಂದು ನೂರಾರು ಬಾರಿ ಸಾಬೀತು ಆಗಿದೆ. ಶಿವಮೊಗ್ಗ ಜಿಲ್ಲೆಯ ಮುತ್ತೂರು ಎಂಬ ಗ್ರಾಮದಲ್ಲಿ ನೂರಕ್ಕೆ ನೂರು ಸಂಸ್ಕೃತ ಭಾಷೆ ಮಾತಾಡುತ್ತಾರೆ. ಅದು ಜನಸಾಮಾನ್ಯರ ಭಾಷೆ ಕೂಡ ಹೌದು ಎಂಬುದು ನನ್ನ ಅಭಿಪ್ರಾಯ. ಅದನ್ನು ಭಾರತದಲ್ಲಿ ಸಂವಹನ ಭಾಷೆಯಾಗಿ ಖಂಡಿತ ಬೆಳೆಸಬಹುದು. ಅದು ಭಾಷೆಯ ಹೇರಿಕೆ ಖಂಡಿತ ಆಗುವುದಿಲ್ಲ.

ಹಿಂದಿ ಯಾಕೆ?
ಭಾರತಕ್ಕೆ ಸಂವಹನ ಭಾಷೆಯಾಗಿ ಹಿಂದಿ ಅಳವಡಿಕೆ ಇನ್ನೂ ಸುಲಭ. ಏಕೆಂದರೆ ಉತ್ತರ ಭಾರತದಲ್ಲಿ ಹೆಚ್ಚಿನವರಿಗೆ ಹಿಂದಿ ಗೊತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಧಾರಾವಾಹಿ, ಹಿಂದಿ ವಾರ್ತೆಗಳನ್ನು , ಹಿಂದಿ ಕಾಮೆಂಟರಿ ಕೇಳುವವರಿಗೆ ಹಿಂದಿ ಅರ್ಥ ಆಗುತ್ತದೆ. ಆದರೆ ಹಿಂದಿಯ ಒಂದು ಶಬ್ದವು ಕೂಡ ನಮ್ಮ ರಾಜ್ಯದಲ್ಲಿ ಬರಬಾರದು ಎನ್ನುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಬೆಳೆಸುವುದು ಹೇಗೆ? ತಮಿಳುನಾಡಿನಲ್ಲಿ ಹಿಂದಿ ವಾರ್ತೆ, ಧಾರಾವಾಹಿ ಯಾವುದೂ ಕೂಡ ಇಲ್ಲ. ಅವರು ತಮಿಳು ಭಾಷೆಯನ್ನು ತುಂಬ ಬೆಳೆಸಿದ್ದಾರೆ. ಆದರೆ ಬೇರೆ ಭಾಷೆಯೇ ಬೇಡ ಅಂದರೆ ಹೇಗೆ?

ಮೂರನೇ ಆಯ್ಕೆ ಇಂಗ್ಲೀಷ್
ಮೊದಲಾಗಿ ಹೇಳುತ್ತೇನೆ, ಇಂಗ್ಲೀಷ್ ಒಂದು ಭಾಷೆ ಮಾತ್ರ. ಅದು ಜ್ಞಾನ ಅಲ್ಲ. ಅದು ಬ್ರಿಟಿಷರ ಭಾಷೆ ಎಂಬ ಕಾರಣಕ್ಕೆ ಇಂಗ್ಲೀಷನ್ನು ದ್ವೇಷ ಮಾಡುವ ಅಗತ್ಯ ಇಲ್ಲ. ಕನ್ನಡವನ್ನು ಚೆನ್ನಾಗಿ ಕಲಿತವರಿಗೆ ಇಂಗ್ಲೀಷ್ ಭಾಷೆಯನ್ನು ಒಂದು ಸಂವಹನ ಭಾಷೆಯಾಗಿ ಕಲಿಯುವುದು ಖಂಡಿತ ಕಷ್ಟ ಅಲ್ಲ. ಅದು ಜಾಗತಿಕ ಭಾಷೆ ಕೂಡ ಹೌದು. ಇಂದಿಗೂ ಹೆಚ್ಚಿನ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತಿವೆ. ಹಾಗಿರುವಾಗ ಇಂಗ್ಲೀಷ್ ಭಾಷೆಯನ್ನು ಬೇಡ ಅಂದರೆ ಹೇಗೆ? ಜಾಗತೀಕರಣಕ್ಕೆ ತೆರೆದುಕೊಂಡಿರುವ ಭಾರತವು ಇಂಗ್ಲೀಷ್ ಭಾಷೆಯನ್ನು ಬೇಡ ಅನ್ನಲಾದೀತೆ?
ಕರ್ನಾಟಕದಲ್ಲಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಯುತ್ತಿದ್ದಾರೆ. ಚೀನದ ಯುವಕ, ಯುವತಿಯರಿಗಿಂತ ಭಾರತೀಯ ಯುವಕರು ತುಂಬಾ ಚೆನ್ನಾಗಿ ಇಂಗ್ಲೀಷ್ ಭಾಷೆಯನ್ನು ಮಾತಾಡುವ ಕಾರಣ ಭಾರತ ಇಂದು ಐಟಿ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದೆ. ಅದು ಕೇವಲ ವಿದ್ಯಾವಂತರ ಭಾಷೆ, ಬ್ರಿಟಿಷರ ಭಾಷೆ, ಪರಕೀಯ ಭಾಷೆ ಎಂಬ ಭ್ರಮೆಗಳಿಂದ ನಾವು ಹೊರಬಂದರೆ ಇಂಗ್ಲೀಷ್ ಭಾಷೆಯನ್ನು ನಾವು ಖಂಡಿತವಾಗಿ ಬೆಳೆಸಬಹುದು.

ಭಾಷೆ ಕಲಿಯುವುದು ಹೇರಿಕೆ ಅಲ್ಲ
ಯಾವುದೇ ಒಂದು ಭಾಷೆಯನ್ನು ಸಂವಹನಕ್ಕಾಗಿ ಕಲಿಯೋಣ ಅಂದರೆ ಪ್ರಾದೇಶಿಕ ಭಾಷೆಗಳಿಗೆ ಕುತ್ತು ಇದೆ ಎಂದು ಯಾರೂ ಭಾವಿಸಬಾರದು. ಅದು ಆ ಭಾಷೆಗಳ ಹೇರಿಕೆ ಅಲ್ಲ. ಆ ಭಾಷೆಗಳನ್ನು ಸಾಹಿತ್ಯಿಕವಾಗಿ ಕಲಿಯುವ ಅಗತ್ಯ ಇಲ್ಲ. ದೊಡ್ಡ ವ್ಯಾಕರಣ ಕೂಡ ಬೇಕಾಗಿಲ್ಲ. ವ್ಯಾಕರಣದ ಹೆಚ್ಚು ಹಂಗಿಲ್ಲದೆ ಯಾವ ಭಾಷೆಯನ್ನೂ ಕಲಿತು ಮಾತಾಡಬಹುದು. ಮೂರು ತಿಂಗಳ ಒಳಗೆ ಯಾವುದೇ ಒಂದು ಭಾಷೆಯನ್ನು ಮಾತಾಡಲು ಕಲಿಯಬಹುದು. ಮಕ್ಕಳು ಇನ್ನೂ ವೇಗವಾಗಿ ಭಾಷೆಯನ್ನು ಕಲಿಯುತ್ತಾರೆ.

ಭರತ ವಾಕ್ಯ
ಹಿಂದಿ, ಸಂಸ್ಕೃತ ಅಥವಾ ಇಂಗ್ಲೀಷ್‌ಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ರಾಷ್ಟ್ರಭಾಷೆ ಎಂದು ಘೋಷಣೆ ಮಾಡುವ ಅಗತ್ಯ ಇಲ್ಲ. ಪ್ರಾದೇಶಿಕ ಭಾಷೆಗಳ ಸರಿಯಾದ ಅಧ್ಯಯನ ಪ್ರತಿಯೊಬ್ಬರೂ ಮಾಡಬೇಕು. ಕರ್ನಾಟಕದಲ್ಲಿ ಕನ್ನಡ ಕಲಿತವರಿಗೆ ಉದ್ಯೋಗ ಕೊಡುವುದು ಖಂಡಿತ ಆಗಬೇಕು. ಆದರೆ ಇಡೀ ರಾಷ್ಟ್ರ ಮಾತಾಡುವ ಒಂದು ಭಾಷೆ ಭಾರತಕ್ಕೆ ಖಂಡಿತವಾಗಿಯೂ ಬೇಕು. ಏನಂತೀರಿ?

ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top