ವಿದೇಶದಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ

ಮೈಕ್‌ ಆಫ್‌ ಆರೋಪಕ್ಕೆ ತಿರುಗೇಟು

ಹೊಸದಿಲ್ಲಿ : ರಾಹುಲ್‌ ಗಾಂಧಿಗೆ ದೇಶದ ಜನ ಮಾತನಾಡಲು ಎಷ್ಟು ಅವಕಾಶ ಕೊಟ್ಟಿದ್ದಾರೋ ಅಷ್ಟನ್ನು ಲೋಕಸಭೆಯಲ್ಲಿ ಸರಕಾರ ಕೂಡ ಕೊಟ್ಟಿದೆ ಎನ್ನುವ ಮೂಲಕ ವಿದೇಶಗಳಲ್ಲಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್‌ ನಾಯಕನಿಗೆ ಬಿಜೆಪಿ ತಿರುಗೇಟು ನೀಡಿದೆ.

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಮೈಕ್ ಆಫ್ ಮಾಡುವ ಮೂಲಕ ಧ್ವನಿಯನ್ನು ದಮನ ಮಾಡಲಾಗ್ತಿದೆ ಎಂದು ರಾಹುಲ್ ಗಾಂಧಿ ಲಂಡನ್‌ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ , ಹೊರದೇಶದ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಕಾಂಗ್ರೆಸಿಗೆ ಚಾಳಿ ಎಂದು ಕಿಡಿಕಾರಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಪತ್ರಕರ್ತರ ಜೊತೆ ಸಂವಾದದ ವೇಳೆ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನ ಕೇಂದ್ರ ಸಚಿವ ಜೋಶಿ ಅಲ್ಲಗೆಳೆದಿದ್ದಾರೆ.

ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರ ಧ್ವನಿಯನ್ನ ಹತ್ತಿಕ್ಕುವ, ದಮನ ಮಾಡುವ ಪ್ರಯತ್ನವನ್ನ ಸರ್ಕಾರವಾಗಲಿ, ಸ್ಪೀಕರ್ ಆಗಲಿ ಮಾಡಲಿಲ್ಲ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಧ್ವನಿಯನ್ನ ದೇಶದ ಜನರೇ ದಮನ ಮಾಡಿದ್ದಾರೆ. ಪ್ರತಿಪಕ್ಷವಾಗಿಯೂ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವಲ್ಲಿ‌ ವಿಫಲವಾಗಿದೆ. ಹೀಗಾಗಿ ದೇಶದ ಜನರು ಕಾಂಗ್ರೆಸನ್ನು ಪ್ರತಿಪಕ್ಷ ಸ್ಥಾನದಲ್ಲಿಯೂ ಕೂರಿಸಿಲ್ಲ.































 
 

ಲೋಕಸಭೆ ಅಧಿವೇಶನದಲ್ಲಿ‌ ಮೋಷನ್ ಆಫ್ ಥ್ಯಾಂಕ್ಸ್​​ ವೇಳೆ ರಾಹುಲ್ ಗಾಂಧಿಯವರಿಗೆ ನಿಯಮದ ಪ್ರಕಾರ 1 ಗಂಟೆ 9 ನಿಮಷ ಅವಕಾಶ ಕಲ್ಪಿಸಿಕೊಡಬಹುದು. ಆದರೂ, ಲೋಕಸಭೆ ಸ್ಪೀಕರ್ ಅವರು ರಾಹುಲ್ ಗಾಂಧಿಯವರಿಗೆ 2 ಗಂಟೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸದನದಲ್ಲಿ ಅವಕಾಶ ಕಲ್ಪಿಸಿದರೂ ರಾಹುಲ್ ಗಾಂಧಿ ಸರ್ಕಾರದ ಮೇಲೆ ಆಧಾರರಹಿತ ಆರೋಪಗಳನ್ನ ಮಾಡುತ್ತಿದ್ದರು. ಸದನದ ನಿಯಮದ ಪ್ರಕಾರ ಯಾವುದೇ ಪ್ರಾಥಮಿಕ ಮಾಹಿತಿ, ದಾಖಲೆಗಳನ್ನ ರಾಹುಲ್ ಗಾಂಧಿ ಒದಗಿಸಿರಲಿಲ್ಲ.

ಸದನದಲ್ಲಿ ಪ್ರತಿಪಕ್ಷಗಳ ನಾಯಕರ ಮೈಕ್‌ಗಳನ್ನು ಆಫ್ ಮಾಡಲಾಗ್ತಿದೆ ಎಂದು ಆರೋಪಿಸುವ ರಾಹುಲ್ ಗಾಂಧಿ, ತಮ್ಮ ಅಜ್ಜಿ ತುರ್ತು ಪರಿಸ್ಥಿತಿ ಹೇರಿ ದೇಶದ ಎಲ್ಲ ವಿಪಕ್ಷ ನಾಯಕರನ್ನ ಬಂಧಿಸಲು ಆದೇಶಿಸಿದ್ದನ್ನ ಮರೆತಂತಿದೆ. ಇವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕನ ಧೋರಣೆಯನ್ನು ಜೋಶಿ ಲೇವಡಿ ಮಾಡಿದ್ದಾರೆ.

ಸದನದ ನಿಯಮಾವಳಿ ಪ್ರಕಾರ ಸಂಸದ ರಾಹುಲ್ ಗಾಂಧಿ ಅವರಿಗೆ ಎಷ್ಟು ಸಮಯ ಕೊಡಬಹುದು ಅಷ್ಟನ್ನು ಕೊಡಲಾಗಿದೆ. ಅದಕ್ಕೆ ಜನರು ರಾಹುಲ್ ಗಾಂಧಿಯವರ ಪಕ್ಷಕ್ಕೆ ಕೊಟ್ಟಿರುವ ತೀರ್ಪು ಕಾರಣವೇ ಹೊರತು ಸರ್ಕಾರವಲ್ಲ. ಆದರೂ, ವಿದೇಶದ ನೆಲದಲ್ಲಿ ಸ್ಪೀಕರ್ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡ್ತಿರುವುದು ಅವರ ಬಾಲಿಶತನವನ್ನು ತೋರಿಸುತ್ತದೆ ಎಂದು ಜೋಶಿ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top