ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಡಿ 4.7 ಕೋಟಿ ರೂ. ಹಾಗೂ 3 ಕೋಟಿ ರೂ. ಅನುದಾನದಲ್ಲಿ ಬೆದ್ರಾಳ ಬಳಿ ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ಹಾಗೂ ರಸ್ತೆ ವಿಭಜಕ್ಕೆ ದಾರಿದೀಪ ಅಳವಡಿಕೆಗೆ ಶಂಕುಸ್ಥಾಪನೆ ಸಮಾರಂಭ ಬುಧವಾರ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ನಗರರಸಭೆ ಜಲಸಿರಿ ಯೋಜನೆಯಡಿ 117 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. 7.7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿದೆ. 4 ಕೋಟಿ ರೂ. ನಗರಸಭೆಯ ನೂತನ ಕಟ್ಟಡಕ್ಕೆ ಅನುದಾನ ಇಡಲಾಗಿದೆ. ಅಲ್ಲದೆ ನಗರದಲ್ಲಿ 20 ಎಕ್ರೆ ಜಾಗದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಬಿಇಒ ಕಚೇರಿಗೆ ಶಿಲಾನ್ಯಾಸ ಮುಂದೆ ನಡೆಯಲಿದೆ. ಒಟ್ಟಾರೆಯಾಗಿ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಪುತ್ತೂರಿಗೆ ಅಚ್ಛೆದಿನವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸದಸ್ಯೆ ಮಮತಾ ರಂಜನ್, ಕ್ಯಾಂಪ್ಕೋ ಡಿಜಿಎಂ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಸ್ವಾಗತಿಸಿದರು.