ಪುತ್ತೂರು: ಎಲ್ಲಾ ಬಗೆಯ ಬೆಂಕಿ ಅನಾಹುತಗಳಿಗೆ ನೀರು ಹಾಯಿಸುವುದೇ ಪರಿಹಾರವಲ್ಲ. ಬದಲಿಗೆ ವಿವಿಧ ರೀತಿಯ ನಿವಾರಕ ವಿಧಾನಗಳನ್ನು ಅನುಸರಿಸಬೇಕು ಎಂದು ಪುತ್ತೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುಂದರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಏರ್ಪಡಿಸಲಾದ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು.
ಹುಲ್ಲು ಕಟ್ಟಿಗೆ, ಎಣ್ಣೆ, ಅನಿಲ, ವಿದ್ಯುತ್ತಿನಿಂದ ಹಾಗೂ ಇನ್ನಿತರ ವಿಧಗಳಿಂದ ಬೆಂಕಿ ಸಂಭವಿಸಬಹುದು. ಸಂದರ್ಭಕ್ಕೆ ತಕ್ಕಂತೆ ಅದರ ನಿವಾರಣೆಗೆ ನೀರು, ಫೋಮ್ ಮಿಶ್ರಿತ ನೀರು ಹಾಗೂ ಇನ್ನಿತರ ಅಗ್ನಿ ಶಾಮಕಗಳನ್ನು ಬಳಸಬೇಕು ಎಂದ ಅವರು, ಕೆಲವೊಂದು ಬಾರಿ ಸಾಂಪ್ರದಾಯಿಕ ವಿಧಾನಗಳೂ ಕೂಡ ಬಳಕೆಗೆ ಬರುತ್ತವೆ ಎಂದರು. ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಧೃತಿಗೆಡತೆ ನಿವಾರಣೆಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದರು.
ವಿವಿಧ ಅಗ್ನಿಶಾಮಕ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ವಿದ್ಯಾರ್ಥಿಗಳೂ ಕೂಡಾ ಇದರ ವಿಧಾನಗಳನ್ನು ತಾವೇ ಮಾಡುವುದರ ಮೂಲಕ ಕಲಿತುಕೊಂಡರು.
ಪುತ್ತೂರು ಅಗ್ನಿಶಾಮಕ ಸಿಬ್ಬಂದಿಗಳಾದ ಶಂಕರ್, ಪ್ರವೀಣ್, ಅಬ್ದುಲ್ ಅಜೀಝ್, ಪಾಂಡುರಂಗ, ಕಾಂತರಾಜು ಹಾಗೂ ಸಜಿತ್ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಕಾರ್ಯಕ್ರಮ ಸಂಯೋಜಕ ಡಾ.ರೋಬಿನ್ ಶಿಂಧೆ, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.