ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ನಿರ್ಮಾಣವಾಗಲಿದೆ ಜಿಲ್ಲಾ ಕ್ರೀಡಾಂಗಣ | ತೆಂಕಿಲದಲ್ಲಿ ಜಾಗ ಗುರುತಿಸಿದ್ದು, ಯೋಜನಾ ವರದಿಯೂ ಸಿದ್ಧ

ಪುತ್ತೂರು: ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕಾಗಿ ಜಾಗ ಕಾದಿರಿಸಿದ್ದು, ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.

ಶಾಸಕ ಸಂಜೀವ ಮಠಂದೂರು ಅವರು ಮುತುವರ್ಜಿಯ ವಹಿಸಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒಂದೊಂದಾಗಿ ಹೊಂದಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕ್ರೀಡಾಂಗಣವೂ ಒಂದು.

ಪುತ್ತೂರು ನಗರದ ಹೊರವಲಯದ ತೆಂಕಿಲದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಜಿಲ್ಲಾ ಕ್ರೀಡಾಂಗಣಕ್ಕಾಗಿ ಈಗಾಗಲೇ ಸ್ಥಳ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರ ಸರ್ವ ಪ್ರಯತ್ನದಿಂದ ಕ್ರೀಡಾಂಗಣದ ಕನಸು ನನಸಾಗುವುದರಲ್ಲಿದೆ. ಇದಕ್ಕಾಗಿ ಸುಮಾರು 78 ಕೋಟಿ ರೂ. ವಿಸ್ತೃತ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಯೋಜನೆಗೆ ಸರಕಾರದ ಮಂಜೂರಾತಿ ಸಿಕ್ಕಿದರೆ ರಾಷ್ಟ್ರ ಮಟ್ಟದ ಕ್ರೀಡಾಕೂಟ ನಡೆಸುವ ಮಾದರಿಯಲ್ಲಿ ಕ್ರೀಡಾಂಗಣ ರೂಪುಗೊಳ್ಳಲಿದೆ.



































 
 

ಕ್ರೀಡಾಂಗಣ ಕನಸು ನನಸು ಮಾಡುವ ಪ್ರಯತ್ನಕ್ಕೆ ಕೆಲವು ತಿಂಗಳುಗಳ ಹಿಂದೆ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ನಡೆಸಲಾಗಿತ್ತು. ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಪೂರಕವಾದ ಯೋಜನೆಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಬಹುದು ಎಂಬ ಕುರಿತು ಚರ್ಚೆಗಳನ್ನು ನಡೆಸಲಾಗಿತ್ತು.

ತೆಂಕಿಲದಲ್ಲಿರುವ 254-1ರಲ್ಲಿ 5.79 ಮತ್ತು 3170ರಲ್ಲಿ 5 ಎಕ್ರೆ ಸೇರಿದಂತೆ ಒಟ್ಟು 19.12 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಈ ಪೈಕಿ ಕೆಲವು ಎಕ್ರೆಯಷ್ಟು ಜಾಗ ಮರಗಳಿಂದ ಕೂಡಿದ್ದು, ಈ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಪಡೆದುಕೊಂಡು ಅರಣ್ಯ ಇಲಾಖೆಗೆ ಪರ್ಯಾಯವಾಗಿ ಎರಡು ಪ್ರದೇಶಗಳಲ್ಲಿ ಭೂಮಿಯನ್ನು ಹಸ್ತಾಂತರಿಸಲು ಪೂರ್ವ ತಯಾರಿ ನಡೆಯುತ್ತಿದೆ. 

ಕ್ರೀಡಾಂಗಣದ ವಿಶೇಷತೆ:

ಉದ್ದೇಶಿತ ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಚಿಂತನೆ ನಡೆಸಲಾಗಿದ್ದು, ಸಿಂಥೆಟಿಕ್ ಟ್ರ್ಯಾಕ್, ಮಲ್ಟಿಪರ್ಪಸ್ ಒಳಾಂಗಣ ಕ್ರೀಡಾಂಗಣ, ಹಾಕಿ ಮೈದಾನ, ಈಜುಕೊಳ, ಎರಡು ಕ್ರೀಡಾ ವಸತಿ ನಿಲಯಗಳು ಸೇರಿದಂತೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಪೂರಕವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಯೋಜನೆ, ಜತೆಗೆ ಕ್ರೀಡಾಪಟುಗಳಿಗೆ ನಿತ್ಯ ಅಭ್ಯಾಸಕ್ಕೆ ಸವಲತ್ತುಗಳನ್ನು ವ್ಯವಸ್ಥೆಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ತಾಲೂಕು ಕ್ರೀಡಾಂಗಣಕ್ಕೆ ಪರ್ಯಾಯ:

ಈಗಾಗಲೇ ನಗರದ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣ ಸವಲತ್ತುಗಳ ಕೊರತೆಯಿಂದ ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ಹೊಸ ಆಯಾಮ ಕಲ್ಪಿಸುವ ನಿಟ್ಟಿನಲ್ಲಿ ತಾಪಂ ನಿರ್ಣಯ ಕೈಗೊಂಡಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಈ ಕ್ರೀಡಾಂಗಣದ ಅಭಿವೃದ್ಧಿ ನಿಟ್ಟಿನಲ್ಲಿ 15 ಲಕ್ಷ ರೂ. ವೆಚ್ಚದ ಜಿಮ್, 6 ಲಕ್ಷ ರೂ. ವೆಚ್ಚದ ಹೊನಲು ಬೆಳಕಿನ ವ್ಯವಸ್ಥೆ, 5 ಲಕ್ಷ ರೂ. ಟ್ರ್ಯಾಕ್ ಸಮತಟ್ಟು ಮಾಡಲು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇವೆಲ್ಲವನ್ನು ಮನಗಂಡು ತೆಂಕಿಲ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಸಂಜೀವ ಮಠಂದೂರು ಶ್ರಮಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top