ಸರಕಾರಕ್ಕೆ ಇನ್ನೊಂದು ತಲೆನೋವು
ಬೆಂಗಳೂರು: ಸರ್ಕಾರಿ ನೌಕರರ ನಂತರ ಇದೀಗ ಸಾರಿಗೆ ನೌಕರರು ಮುಷ್ಕರ ಹೂಡಲು ಮುಂದಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಸಾರಿಗೆ ನಿಗಮ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ನಡೆಯಲಿದ್ದು, ಧರಣಿ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ನೀಡಲಿದ್ದಾರೆ. ರಾಜ್ಯದ ನಾಲ್ಕು ನಿಗಮಗಳ ಬಸ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಸಾರಿಗೆ ನೌಕರರ ಕೂಟ ಈಗಾಗಲೇ ಎರಡು ಬಾರಿ ಮುಷ್ಕರ ಮಾಡಿದೆ. ನಾಲ್ಕು ದಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು.
ನಾಳೆಯಿಂದ ಎಲ್ಲ ಘಟಕಗಳಲ್ಲಿ ಮುಷ್ಕರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಹಿಂದೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಲಿದ್ದಾರೆ. ಈ ಹಿಂದೆ ಸಾರಿಗೆ ನೌಕರರಿಗೆ ಸರ್ಕಾರ ಭರವಸೆಯನ್ನ ನೀಡಿತ್ತು. ಆದರೆ ವೇತನ ವಿಚಾರವಾಗಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಎಂದು ಸಾರಿಗೆ ನೌಕರರ ಯೂನಿಯನ್ ಹೇಳಿದೆ.
ಆರನೇ ವೇತನ ಆಯೋಗದ ಮಾದರಿಯಲ್ಲಿ ವೇತನ, ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ, ಅಮಾನತು, ಪೋಲಿಸ್ ಕೇಸ್ ಹಿಂಪಡೆಯುವುದು, ಸಾರಿಗೆ ನೌಕರರ ಸಂಘಕ್ಕೆ ಚುನಾವಣೆ ನಡೆಸುವುದು ನೌಕರರ ಪ್ರಮುಖ ಬೇಡಿಕೆಗಳು. ಸಾರಿಗೆ ನಿಗಮಗಳ ಖಾಸಗೀಕರಣ, ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಖಾಸಗೀಕರಣ, ಹೊರಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕವನ್ನು ಸಾರಿಗೆ ನೌಕರರು ವಿರೋಧಿಸುತ್ತಿದ್ದಾರೆ.