ಸುಳ್ಯ: ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ.11ರಂದು ಸುಳ್ಯ ಕ್ಷೇತ್ರಕ್ಕೆ ಆಗಮಿಸಲಿದೆ. ಸುಳ್ಯದಲ್ಲಿ ಅದ್ದೂರಿ ರೋಡ್ ಶೋ ನಡೆಯಲಿದೆ. ಬಿಜೆಪಿಯ ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಯಶಸ್ವಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ತಿಳಿಸಿದ್ದಾರೆ.
ಮಾ.11ರಂದು ಬೆಳಗ್ಗೆ ಮಡಿಕೇರಿಯಿಂದ ಹೊರಡುವ ವಿಜಯ ಸಂಕಲ್ಪ ಯಾತ್ರೆ ಮಧ್ಯಾಹ್ನದ ವೇಳೆಗೆ ಸಂಪಾಜೆಗೆ ಆಗಮಿಸಲಿದೆ. ಜಿಲ್ಲಾ ಗಡಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ ಸಂಪಾಜೆ, ಅರಂತೋಡುಗಳಲ್ಲಿ ಯಾತ್ರೆ ಸಾಗಿ ಬಂದು ಸುಳ್ಯಕ್ಕೆ ಆಗಮಿಸಲಿದೆ. ಮಧ್ಯಾಹ್ನ 2.30ರ ಸುಮಾರಿಗೆ ಸುಳ್ಯದ ವಿಷ್ಣು ಸರ್ಕಲ್ ಬಳಿ ಯಾತ್ರೆಯನ್ನು ಸ್ವಾಗತಿಸಲಾಗುವುದು. 3 ಗಂಟೆಯಿಂದ ನಗರದಲ್ಲಿ ರೋಡ್ ಶೋ ನಡೆಯಲಿದ್ದು ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಅಭೂತಪೂರ್ವವಾಗಿ ಸಾಗಿ ಬರಲಿದೆ..
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಸೇರಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವರು, ಶಾಸಕರು, ಬಿಜೆಪಿ ರಾಜ್ಯ ನಾಯಕರು, ಜಿಲ್ಲಾ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅಂಗಾರ ತಿಳಿಸಿದ್ದಾರೆ. ಯಾತ್ರೆಯ ಸಿದ್ಧತೆಗಾಗಿ ಗ್ರಾಮ ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಕಾರ್ಯಕರ್ತರು, ಅಭಿಮಾನಿಗಳು ಹಾಗು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದ್ದಾರೆ.