ಏಪ್ರಿಲ್‌ನಿಂದ ಶೇ.5-10 ಹೆಚ್ಚಿಸಲು ನಿರ್ಧಾರ
ಹೊಸದಿಲ್ಲಿ : ಹೆದ್ದಾರಿ ಟೋಲ್ ದರ ಏರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈಗಾಗಲೇ ಹೆದ್ದಾರಿಗಳಲ್ಲಿ ಅಲ್ಲಲ್ಲಿ ರಸ್ತೆ ಶುಲ್ಕ ಪಾವತಿಸಿ ಹೈರಾಣಾಗಿರುವ ವಾಹನ ಸವಾರರಿಗೆ ಟೋಲ್ ಮತ್ತೆ ಬರೆ ಎಳೆಯಲಿದೆ.ರಾಷ್ಟ್ರಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇ ಟೋಲ್ಗಳಲ್ಲಿ ದರ ಏರಿಕೆ ಮಾಡಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್ಎಐ ನಿರ್ಧರಿಸಿದೆ. ಟೋಲ್ ದರ ಶೇ. 5ರಿಂದ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮಾಸಿಕ ಟೋಲ್ ಪಾಸ್ನ ದರವನ್ನೂ ಶೇ. 10ರಷ್ಟು ಏರಿಕೆ ಮಾಡಬಹುದು ಎನ್ನಲಾಗುತ್ತಿದೆ.
ಟೋಲ್ ದರವನ್ನು ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯದ ಅನುಮೋದನೆ ಬಳಿಕ ಮುಂದಿನ ಹಣಕಾಸು ವರ್ಷಕ್ಕೆ ಹೊಸ ಟೋಲ್ ದರಗಳು ಜಾರಿಗೆ ಬರಲಿವೆ. ಕಾರು ಮತ್ತು ಸಣ್ಣ ವಾಹನಗಳಿಗೆ ಟೋಲ್ ದರ ಶೇ. 5ರಷ್ಟು ಹೆಚ್ಚಾಗಬಹುದು. ಭಾರಿ ವಾಹನಗಳು ಪಾವತಿಸಬೇಕಾದ ಟೋಲ್ ದರ ಶೇ. 10ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ದರದ ಪ್ರಕಾರ ಎಕ್ಸ್ಪ್ರೆಸ್ವೇಗಳಲ್ಲಿ ಪ್ರತಿ ಕಿಲೋಮೀಟರ್ಗೆ 2.19 ರೂ.ನಂತೆ ಟೋಲ್ ದರ ನಿಗದಿ ಮಾಡಲಾಗಿದೆ.
2022-23ರ ವರ್ಷದಲ್ಲಿ ಟೋಲ್ ದರಗಳನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಲಾಗಿತ್ತು. ಈ ವರ್ಷ ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ 33,881.22 ಕೋಟಿ ರೂ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 21ರಷ್ಟು ಹೆಚ್ಚು. 2018 ರಿಂದೀಚೆಗೆ ಸುಮಾರು ಒಂದೂವರೆ ಲಕ್ಷ ಕೋಟಿ ರೂ. ಟೋಲ್ ಸಂಗ್ರಹವಾಗಿದೆ.
ಫಾಸ್ಟ್ಯಾಗ್ ವ್ಯವಸ್ಥೆ ಬಂದ ಮೇಲೆ ಟೋಲ್ ಸಂಗ್ರಹ ಗಮನಾರ್ಹವಾಗಿ ಹೆಚ್ಚಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಮೂಲಕ ದಿನಕ್ಕೆ ಸರಾಸರಿ 140 ಕೋಟಿ ರೂ. ಟೋಲ್ ಸಂಗ್ರಹವಾಗುತ್ತಿದೆ.
ಟೋಲ್ ಪ್ಲಾಜಾದಿಂದ 20 ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ವಾಣಿಜ್ಯೇತರ ವಾಹನ ಸವಾರರಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಇದು ಸದ್ಯ ತಿಂಗಳಿಗೆ 315 ರೂ. ಇದೆ. ಈ ದರವನ್ನು ಶೇ. 10ರಷ್ಟು ಹೆಚ್ಚು ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.